ಹುಬ್ಬಳ್ಳಿ: ಇಲ್ಲಿಯ ಮಂಗಳವಾರಪೇಟೆ ರುದ್ರಾಕ್ಷಿ ಮಠದಲ್ಲಿ ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಉತ್ಸವ ಹಾಗೂ ಪ್ರವಚನ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಯಿತು.
ಕಲಬುರಗಿ ಸೊನ್ನದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮೀಜಿ, ವಿರಕ್ತಮಠ ರಾಯನಾಳ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರವಚನ ಉದ್ಘಾಟನೆ ನೆರವೇರಿಸಲಾಯಿತು.
ಶ್ರೀ ಜಡೆಸಿದ್ದೇಶ್ವರ ಶಿವಾಚಾರ್ಯರು ನಿಜಗುಣರ ಚರಿತ್ರೆ ಪ್ರವಚನ ನೀಡಿದರು. ನೇತೃತ್ವವನ್ನು ಶ್ರೀಮಠದ ಬಸವಲಿಂಗ ಸ್ವಾಮೀಜಿ ವಹಿಸಿದ್ದರು.
ಕವಿವಿ ಸಿಂಡಿಕೇಟ್ ಸದಸ್ಯ ಡಾ. ಲಿಂಗರಾಜ ಮುಳ್ಳಳ್ಳಿ ಉಪನ್ಯಾಸ ನೀಡಿದರು. ವಿಶೇಷ ಸಾಧನೆ ಮಾಡಿದ ಪಿ.ಬಿ. ಹಿರೇಮಠ ಇವರಿಗೆ ಸನ್ಮಾನಿಸಲಾಯಿತು.
ಶ್ರೀಸದಾನಂದ ಶಿವಾಚಾರ್ಯರು ಗುರುಗುಂಟಿಮಠ, ಮಹಾಂತೇಶ ಗಿರಿಮಠ, ನಾಗರಾಜ ಗೌರಿ, ಇತರರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಸಾವಕಾರ ಪ್ರಾಸ್ತಾವಿಕ ಮಾತನಾಡಿದರು. ದೋಟಿಹಾಳದ ಶ್ರೀ ಚಂದ್ರಶೇಖದ ದೇವರು ಸ್ವಾಗತಿಸಿದರು. ಶಾಂತಕ್ಕ ಈಟಿ ತಂಡದವರು ಪ್ರಾರ್ಥನೆ ಹಾಡಿದರು.
ನ. 13ರ ವರೆಗೆ ಪ್ರವಚನ:
ನಿತ್ಯ ಸಂಜೆ 6ಕ್ಕೆ ವಿವಿಧ ವಿಷಯದ ಮೇಲೆ ಸ್ವಾಮೀಜಿಗಳು ಪ್ರವಚನ ನೀಡುವರು. ನ. 13ರಂದು ಬೆಳಗ್ಗೆ 9ಕ್ಕೆ ನಿಜಗುಣ ಶಿವಯೋಗಿಗಳ ತೊಟ್ಟಿಲೋತ್ಸವ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಈ ಬಾರಿಯ ನಿಜಗುಣರ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶಕುಮಾರ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಸಂಜೆ 6ಕ್ಕೆ ದೀಪೋತ್ಸವ ನಡೆಯಲಿದೆ.