ಮೈಸೂರು: ನೀರಿನಲ್ಲಿ ತೇಲುವ ಕೌಶಲ ಮೆರೆದ ನಗರದ ಭರವಸೆಯ ಈಜುಪಟು, ಡಿ ಪೌಲ್ ಅಂತಾರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿ ಎಂ.ನಿಹಾಲ್ ರಂಜನ್ ಗೌಡ ಸಿಐಎಸ್‌ಸಿಇ ಪಠ್ಯಕ್ರಮದ ವಲಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನ ಸೇರಿದಂತೆ ನಾಲ್ಕು ಪದಕ ಪಡೆದು ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಪರ್ಧೆಯ 50 ಮೀ.ಫ್ರೀ ಸ್ಟೈಲ್, 100 ಬ್ಯಾಕ್ ಸ್ಟ್ರೋಕ್, 4*100 ಮೀ.ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀ. ಬ್ರೆಸ್ಟ್ ಸ್ಟ್ರೋಕ್ ತೃತೀಯ ಸ್ಥಾನ ಪಡೆದಿದ್ದಾರೆ.
ನಿಹಾಲ್ ರಂಜನ್ ಗೌಡ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದ ತರಬೇತುದಾರ ಸ್ಕಂದ ಆರ್.ಅಶ್ವಥ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ.