ಜಿಲ್ಲೆ

ರಾಜಧಾನಿಯಲ್ಲಿ ಇನ್ನು ನೈಟ್‌ ಲೈಫ್​​​ ಅಧಿಕೃತ: ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಪ್ರಕಟ

ಬೆಂಗಳೂರು: ಮೆಟ್ರೋಪಾಲಿಟನ್ ಸಿಟಿ ಸ್ಥಾನಮಾನ ಹೊಂದಿರುವ ರಾಜಧಾನಿ ಬೆಂಗಳೂರು ನಗರದಲ್ಲಿ ಇನ್ನು ನೈಟ್ ಲ್ೈ ಅಧಿಕೃತ. ಮಧ್ಯರಾತ್ರಿ ಒಂದು ಗಂಟೆಯವರೆಗೂ ಹೋಟೆಲ್ ಹಾಗೂ ಬಾರ್‌ಗಳು ತೆರೆದಿರಲಿದ್ದು, ಸಾರ್ವಜನಿಕರು ಯಾವುದೇ ಅಳುಕಿಲ್ಲದೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ವಾಣಿಜ್ಯ-ವ್ಯಾಪಾರದ ದೃಷ್ಟಿಯಿಂದ ಮಧದ್ಯರಾತ್ರಿವರೆಗೂ ಅವಕಾಶ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ತನ್ನ 2024-25ನೇ ಸಾಲಿನ ಬಜೆಟ್‌ನಲ್ಲಿ ಭರವಸೆ ನೀಡಿತ್ತು. ಇದರನ್ವಯ ಈವರೆಗೆ ಮಧ್ಯರಾತ್ರಿವರೆಗೆ ವ್ಯಾಪಾರ-ವಹಿವಾಡು ನಡೆಸಲು ಇದ್ದ ನಿರ್ಬಂಧವನ್ನು ತೆಗೆದುಹಾಕಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ದೇಶದ ಕಾಸ್ಮೊಪಾಲಿಟನ್ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ದಿನದ 24 ಗಂಟೆಯೂ ವ್ಯಾಪಾರ ಹಾಗೂ ವಹಿವಾಟಿಗೆ ಅವಕಾಶ ಕಲ್ಪಿಸಬೇಕೆಂಬ ಕೂಗು ದಶಕದ ಹಿಂದೆಯೇ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ್ದ ಕಾರಣ ಮಧ್ಯರಾತ್ರಿವರೆಗೂ ವಹಿವಾಟು ವಿಸ್ತರಿಸಲು ಪೊಲೀಸ್ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಐಟಿ-ಬಿಟಿ ಸೇರಿದಂತೆ ಕೆಲ ವ್ಯಾಪಾರ ಸಂಘಟನೆಗಳು ಅವಕಾಶ ನೀಡುವಂತೆ ಸರ್ಕಾರದ ಮೇಲೆ ಸತತ ಒತ್ತಡ ತಂದಿದ್ದವು. ಜತೆಗೆ ಮಧ್ಯರಾತ್ರಿಯಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಆಹಾರ ಸೇವಿಸಲು ಹೋಟೆಲ್ ಸೌಲಭ್ಯ ಕಲ್ಪಿಸಬೇಕು ಎಂದು ಹೋಟೆಲ್ ಮಾಲೀಕರ ಸಂಘವೂ ಒತ್ತಾಯ ಮಾಡುತ್ತಲೇ ಬಂದಿದ್ದವು. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೂ ಸಲ್ಲಿಸಿ ನೈಟ್ ಲ್ೈ ಜಾರಿಗಾಗಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನಪ್ರತಿನಿಧಿಗಳಿಂದಲೂ ಒತ್ತಡ ಹೇರಿಕೆ:

ಮಧ್ಯರಾತ್ರಿವರೆಗೆ ವಹಿವಾಟು ನಡೆಸಲು ಅವಕಾಶ ನೀಡುವ ಜತೆಗೆ ತಡವಾಗಿ ನಗರಕ್ಕೆ ಆಗಮಿಸುವ ಜನರಿಗೆ ಊಟ ಮಾಡಲು ವ್ಯವಸ್ಥೆಯೇ ಇಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುವುದಕ್ಕಿಂತ ಹೊರ ರಾಜ್ಯಗಳಲ್ಲಿ ಬೆಂಗಳೂರಿನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಸೇವನೆಗಾದರೂ ಮಧ್ಯರಾತ್ರಿ 1ರವರೆಗೆ ಹೋಟೆಲ್‌ಗಳನ್ನು ತೆರೆಯಲು ಒಪ್ಪಿಗೆ ನೀಡಬೇಕೆಂದು ನಗರದ ಹಲವು ಶಾಸಕರು ಶಾಸನಸಭೆಯಲ್ಲಿ ಆಗ್ರಹಿಸುತ್ತಾ ಬಂದಿದ್ದಾರೆ.

ಪೊಲೀಸರಿಗೆ ಸವಾಲು:

ನಗರದಲ್ಲಿ ಮಧ್ಯರಾತ್ರಿವರೆಗೂ ವಹಿವಾಟು ನಡೆಸಲು ಅವಕಾಶ ಕಲ್ಪಿಸಿರುವ ಪ್ರಸ್ತಾಪಕ್ಕೆ 2021ರಲ್ಲೇ ಒಪ್ಪಿಗೆ ನೀಡಲಾಗಿತ್ತು. ಜತೆಗೆ ಕೆಲ ಷರತ್ತುಗಳನ್ನು ಒಡ್ಡಲಾಗಿತ್ತು. ಮುಖ್ಯವಾಗಿ ಆರಕ್ಷಣೆ ವಿಚಾರದಲ್ಲಿ ಪೊಲೀಸ್ ಒಪ್ಪಿಗೆ ಅಗತ್ಯವೆಂದು ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿತ್ತು. ಆದರೆ, ಪೊಲೀಸ್ ಇಲಾಖೆ ನಗರದಲ್ಲಿ ನೈಟ್ ಲ್ೈ ವಿಸ್ತರಣೆಯಾದಲ್ಲಿ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ ಎಂದು ಪ್ರತಿಪಾದಿಸಿತ್ತು. ರಾತ್ರಿಗಸ್ತು ಸೇರಿ ಕೆಲ ಸೌಲಭ್ಯಗಳು ಇಲ್ಲದೆ ಜನರಿಗೆ ರಕ್ಷಣೆ ನೀಡಲು ಕಷ್ಟ ಎಂಬ ಸಂಗತಿಯನ್ನು ಆಗಿನ ನಗರ ಪೊಲೀಸ್ ಕಮಿಷನರ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಈಗ ಆ ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ನಿವಾರಿಸಿದ ಬಳಿಕ ರಕ್ಷಣೆ ನೀಡುವ ಜವಾಬ್ದಾರಿ ಪೊಲೀಸ್ ಇಲಾಖೆಗೆ ಸೇರಿದೆ. ಮಧ್ಯರಾತ್ರಿವರೆಗೂ ಬಾರ್, ಹೋಟೆಲ್ ತೆರೆಯುವದರಿಂದ ಅದರಿಂದ ಉಂಟಾಗುವ ಸಾಧಕ-ಬಾಧಕಗಳ ವಾಸ್ತವವನ್ನು ಇನ್ನಷ್ಟೇ ಗಮನಿಸಿ ಕ್ರಮ ಕೈಗೊಳ್ಳಬೇಕಿದೆ ಎಂಬ ಮಾತು ಕೇಳಿಬಂದಿದೆ.

ನಗರದಲ್ಲಿ ಮಧ್ಯರಾತ್ರಿವರೆಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಿರುವ ಸರ್ಕಾರದ ನಿರ್ಧಾರವನ್ನು ನಮ್ಮ ಸಂಘವು ಸ್ವಾಗತಿಸುತ್ತದೆ. ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದ್ದು, ಉದ್ಯೋಗಾವಕಾಶ ಹೆಚ್ಚಳಕ್ಕೂ ಅವಕಾಶ ದೊರೆಯಲಿದೆ.

- ಪಿ.ಸಿ.ರಾವ್, ಗೌರವಾಧ್ಯಕ್ಷ, ಬೆಂಗಳೂರು ಹೋಟೆಲುದಾರರ ಸಂಘ