ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹಾಗೂ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ ಟಾರ್ಚ್‌ಲೈಟ್‌ಗಳೊಂದಿಗೆ ನಗರದಲ್ಲಿ ಇತ್ತೀಚೆಗೆ ನೈಟ್ ವಾಕಥಾನ್ ಏರ್ಪಡಿಸಲಾಗಿತ್ತು.
ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರದ ಸಿಒಒ ಡಾ. ಅಬ್ದುಲ್ ರಹೀಂ ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಶಿಕ್ಷಣ ಕೊಡುವುದು, ಧೂಮಪಾನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ವಾಕಥಾನ್ ಆಯೋಜಿಸಲಾಗಿದೆ. ಜನರು ತಿಳಿವಳಿಕೆ ಪಡೆಯುವುದರ ಮೂಲಕ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಹಿಮ್ಮೆಟ್ಟಿಸಬೇಕು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಸೆಂಟರ್‌ನಿಂದ ಆರಂಭವಾದ ವಾಕಥಾನ್, ಚನ್ನಮ್ಮ ವೃತ್ತ, ಪಿಂಟೋ ವೃತ್ತ, ದೇಸಾಯಿ ವೃತ್ತದ ಮೂಲಕ ಮರಳಿ ಕ್ಯಾನ್ಸರ್ ಸೆಂಟರ್ ತಲುಪಿತು. ವಾಕಥಾನ್‌ನಲ್ಲಿ 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಪಿಎಸ್‌ಐಗಳಾದ ಮಲ್ಲಿಕಾರ್ಜುನ ಹೊಸೂರ, ಕವಿತಾ, ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ, ದೇಶಪಾಂಡೆ ಸ್ಕಿಲ್ಲಿಂಗ್ ಉಪನಿರ್ದೇಶಕ ರಾಜಬ್ ಅಲಿ ಎಂ., ಹಿರಿಯ ವ್ಯವಸ್ಥಾಪಕ ಶಿವಾನಂದ ಇತರರು ಇದ್ದರು.