ಗಣೇಶ ಹಬ್ಬದ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆ ಸಮಿತಿಯವರು ಗಣೇಶ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆಯೊಂದಿಗೆ ಕೊಂಡೊಯ್ಯುತ್ತಿರುವುದು. 
ಜಿಲ್ಲೆ

ರಾತ್ರಿಯಾದರೂ ಮುಗಿಯದ ಮೂರ್ತಿ ಪ್ರತಿಷ್ಠಾಪನೆ

Kopala - Desk - Eraveni

ಗಂಗಾವತಿ: ಪ್ರಸಕ್ತ ಸಾಲಿನ ಗಣೇಶ ಹಬ್ಬವನ್ನು ವಿವಿಧ ಪ್ರತಿಷ್ಠಾಪನೆ ಸಮಿತಿಯವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದ್ದು, ರಾತ್ರಿಯಾದರೂ ಮೂರ್ತಿ ಪ್ರತಿಷ್ಠಾಪನೆ ಮುಗಿದಿರಲಿಲ್ಲ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ 170ಕ್ಕೂ ಹೆಚ್ಚು ಮೂರ್ತಿ ಪ್ರತಿಷ್ಠಾಪಿಸಿದ್ದು, ಪೂನಾ, ಹೈದರಾಬಾದ್‌ನಿಂದ ಬಂದಿದ್ದ ಮೂರ್ತಿಗಳೇ ಹೆಚ್ಚಾಗಿದ್ದವು. ಹೂವು, ಹಣ್ಣು, ಬಾಳೆ ಕಂಬ, ಎಕ್ಕೆ ಹೂವು, ಕರಿಕಿ ಸೇರಿ ವಿವಿಧ ಖಾದ್ಯಗಳ ಮಾರಾಟ ಜೋರಾಗಿತ್ತು.

ಮೂರ್ತಿಗಳನ್ನು ವಾದ್ಯಮೇಳದೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು. ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ಅಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಪಥ ಸಂಚಲನ:
ಪೊಲೀಸರು ನಗರದಾದ್ಯಂತ ಪಥ ಸಂಚಲನ ನಡೆಸಿದ್ದು, ಸಾಮರಸ್ಯದಿಂದ ಗಣೇಶ ಹಬ್ಬ ಆಚರಿಸುವಂತೆ ಸಂದೇಶ ನೀಡಿದರು. ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಪೊಲೀಸರು, ಸೂಕ್ಷ್ಮ ಪ್ರದೇಶದ ಕಾಲನಿಗಳಲ್ಲೂ ಪಥ ಸಂಚಲ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದ 33 ಪ್ರದೇಶದಲ್ಲಿ 108 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರ ಪಿಐ ಪ್ರಕಾಶ ಎಲ್. ಮಾಳೆ, ಗ್ರಾಮೀಣ ಪಿಐ ಸೋಮಶೇಖರ್ ಜುತ್ತಲ್ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿದೆ.

ಪರಿಸರ ಸ್ನೇಹಿ ವಿನಾಯಕ:

ಪರಿಸರ ರಕ್ಷಣೆಗಾಗಿ ಚಾರಣ ಬಳಗದ ಸದಸ್ಯರು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿದ್ದು, ಪ್ರತಿಯೊಂದು ಗಣೇಶ ಮೂರ್ತಿ ಹಿಂದೆ ಒಂದು ಸಸಿಗಳ ವ್ಯವಸ್ಥೆ ಮಾಡಲಾಗಿದೆ. ಉಮೇಶ ಪತ್ತಾರ್ ತಯಾರಿಸಿದ ಮೂರ್ತಿಗಳನ್ನು ಆಸಕ್ತಿರಿಗೆ ವಿತರಿಸಲಾಗಿದೆ. ಗಿಡದೊಂದಿಗೆ ಗಣಪ ಪರಿಕಲ್ಪನೆಯಡಿ ಮೂರ್ತಿ ತಯಾರಿಸಿದ್ದು, ಮೂರ್ತಿಯೊಂದಿಗೆ ಸಸಿಗಳಿಗೂ ಪೂಜೆ ಸಲ್ಲಿಕೆಯಾಗುತ್ತಿರುವುದರಿಂದ ಸಸಿ ನೆಟ್ಟ ನಂತರವೂ ಆರೈಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ಗಣಪ ಕುರಿತು ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ಮಾಹಿತಿ ನೀಡಿದರು.