ಮಂಗಳೂರು/ಉಡುಪಿ: ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ಧಾರದಂತೆ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಕರೊನಾ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ.
ಏ.10ರಿಂದ 20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮಂಗಳೂರು ನಗರ ಮತ್ತು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅತ್ಯವಶ್ಯ ಸೇವೆಗಳಿಗೆ ಮಾತ್ರ ಅನುಮತಿಸಿ, ಉಳಿದ ಸೇವೆ, ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಖಾನೆ, ಕಂಪನಿ, ಸಂಸ್ಥೆಗಳು ಯಥಾರೀತಿಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು. ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಎಲ್ಲ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲಾಗಿದೆ. ಅತ್ಯವಶ್ಯಕ ಸೇವೆಗಳನ್ನು ಒದಗಿಸುವ ವಾಹನಗಳು, ಸರಕು ಸಾಗಾಟ ವಾಹನಗಳು, ಹೋಮ್ ಡೆಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ರಾತ್ರಿ ವೇಳೆ ಪ್ರಯಾಣದ ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್‌ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಬಹುದು. ಆದೇಶ ಪಾಲಿಸದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮದುವೆ, ಮೆಹಂದಿಗೂ ಅನ್ವಯ: ಉಡುಪಿ, ಮಣಿಪಾಲ ಮತ್ತು ಮಲ್ಪೆ ಒಳಗೊಂಡ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ಬಳಿಕ ಯಕ್ಷಗಾನ, ನಾಟಕ, ದೇವಸ್ಥಾನಗಳ ಉತ್ಸವ, ನೇಮೋತ್ಸವ ಸಹಿತ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಮದುವೆ, ಮೆಹಂದಿ ಮತ್ತಿತರ ಕಾರ್ಯಕ್ರಮಗಳಿಗೂ ಈ ನಿರ್ಬಂಧ ಅನ್ವಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಕರೊನಾ ಕರ್ಫ್ಯೂ ವಿಚಾರದಲ್ಲಿ ಸರ್ಕಾರ ನೀಡಿರುವ ಆದೇಶದ ಅನ್ವಯವೇ ಮಂಗಳೂರು ನಗರಕ್ಕೆ ಸಂಬಂಧಿಸಿ ಆದೇಶ ಹೊರಡಿಸಿದೆ. ಇಲ್ಲಿನ ಧಾರ್ಮಿಕ ಕಾರ್ಯಕ್ರಮ, ಯಕ್ಷಗಾನ ಇತ್ಯಾದಿ ಕುರಿತು ಯಾವುದೇ ಬದಲಾವಣೆ ಇದ್ದರೂ ಸರ್ಕಾರ ಆ ಕುರಿತು ತಿಳಿಸಬೇಕಷ್ಟೇ.
ಡಾ.ಕೆ.ವಿ.ರಾಜೇಂದ್ರ ದ.ಕ ಜಿಲ್ಲಾಧಿಕಾರಿ