ಜಿಲ್ಲೆ

ಒಂಟಿಯಾಗಿ ಹೋದರೆ ಕಲ್ಲೇಟು ಗ್ಯಾರಂಟಿ!

ರೇಷ್ಮೆ ನಗರ ಡೆಸ್ಕ್

ರಾಮನಗರ: ಈ ಮಾರ್ಗದಲ್ಲಿ ರಾತ್ರಿ ವೇಳೆ ಒಬ್ಬಂಟಿಯಾಗಿ ಸಂಚರಿಸಿದರೆ ಕಲ್ಲಿನೇಟು ಗ್ಯಾರಂಟಿಯಾಗಿದ್ದು, ಬೈಕ್ ಸವಾರರು ದುರುಳರ ಹಾವಳಿಯಿಂದ ತತ್ತರಿಸಿದ್ದಾರೆ.

ಹೌದು, ತಾಲೂಕಿನ ಕೈಲಾಂಚ ಹೋಬಳಿಯ ಕನಕಪುರ-ರಾಮನಗರ ರಸ್ತೆಯ ಅಚ್ಚಲು ಬಳಿಯ ಹಳೇ ಎಚ್‌ಜೆಎಸ್ ಕಾರ್ಖಾನೆಗೆ ಹೊಂದಿಕೊಂಡ ರಸ್ತೆಯೇ ಕಲ್ಲಿನೇಟು ಬೀಳುವ ಸ್ಥಳವಾಗಿದೆ.

ರಾಮನಗರ-ಕನಕಪುರ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು, ನೂರಾರು ವಾಹನಗಳು ಓಡಾಡುತ್ತ್ತವೆ. ಅಚ್ಚಲು ಬಳಿ ಹಲವು ಕಾರ್ಖಾನೆಗಳಿದ್ದು, ರಾತ್ರಿ ಪಾಳಿಯಲ್ಲಿಯೂ ಕಾರ್ಖಾನೆ ಕಾರ್ಯಾಚರಿಸುತ್ತದೆ. ನೂರಾರು ಕಾರ್ಮಿಕರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಕೆಲಸಕ್ಕೆ ಬಂದು ಹೋಗುತ್ತಾರೆ. ಆದರೆ ಇತ್ತೀಚೆಗೆ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವವರಿಗೆ ತೊಂದರೆ ಎದುರಾಗಿದ್ದು, ಎಚ್‌ಜೆಎಸ್ ಕಾರ್ಖಾನೆ ಬಳಿಯ ರಸ್ತೆ ಪಕ್ಕದ ಮರದ ಮರೆಯಲ್ಲಿ ಗಿಡ ಗಂಟಿಗಳ ಮಧ್ಯೆ ನಿಂತು ರಾತ್ರಿ ವೇಳೆ ಕಲ್ಲಿನಿಂದ ಹೊಡೆಯುವ ಪ್ರಕರಣ ಹೆಚ್ಚುತ್ತಿವೆ. ಇದರಿಂದ ಈ ರಸ್ತೆಯಲ್ಲಿ ಕಾರ್ಮಿಕರಾದಿಯಾಗಿ ಜನಸಾಮಾನ್ಯರು ಸಂಚರಿಸಲು ಆತಂಕ ಪಡುವಂತಾಗಿದೆ.

ಈ ಭಾಗದ ಕಾರ್ಖಾನೆಯಲ್ಲಿ ಕಾರ್ಮಿಕನಾಗಿರುವ ಶ್ಯಾನುಭೋಗನಹಳ್ಳಿ ಗ್ರಾಮದ ಎಸ್.ಸಿ. ಸುರೇಶ್ ಭಾನುವಾರ ರಾತ್ರಿ 9.50ರ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಬೇಕಾದರೆ ಕಲ್ಲಿನಿಂದ ಹೊಡೆದಿದ್ದಾರೆ. ಆದರೆ ತಲೆಗೆ ಹೆಲ್ಮೆಟ್ ಧರಿಸಿದ್ದ ಕಾರಣ ಅಪಾಯವಾಗಿಲ್ಲ. ಇದೇ ವೇಳೆ ಚನ್ನಮಾನಹಳ್ಳಿ ಗ್ರಾಮದ ಅರ್ಕೇಶ್ ಕೂಡ ಜತೆಯಲ್ಲಿ ಇದ್ದರು. ಇಬ್ಬರೂ ರಾಮನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.