ದೆಹಲಿಯಲ್ಲಿ ಕೇಂದ್ರ ಸಚಿವ ಚಿರಾಗ ಪಾಸ್ವಾನ್ ಅವರೊಂದಿಗೆ ಜಗದೀಶ ಶೆಟ್ಟರ್ ಚರ್ಚಿಸಿದರು. 
ಜಿಲ್ಲೆ

ಎನ್‌ಐಎಫ್‌ಟಿಇಎಂ ಸ್ಥಾಪನೆಗೆ ಶೆಟ್ಟರ್ ಮನವಿ

ಶಂಕರ ಗೆಜ್ಜಿ

ಬೆಳಗಾವಿ: ಶೈಕ್ಷಣಿಕ, ಆರೋಗ್ಯ, ಕೃಷಿ, ಕೈಗಾರಿಕೆ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಯಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ವಾಣಿಜ್ಯೋದ್ಯಮ ಮತ್ತು ನಿರ್ವಹಣೆ ಸಂಸ್ಥೆ (ಎನ್‌ಐಎಫ್‌ಟಿಇಎಂ) ಸ್ಥಾಪನೆ ಮಾಡುವಂತೆ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವ ಚಿರಾಗ ಪಾಸ್ವಾನ್ ಅವರಿಗೆ ಸಂಸದ ಜಗದೀಶ ಶೆಟ್ಟರ್ ಈಚೆಗೆ ಮನವಿ ಸಲ್ಲಿಸಿದರು.

ದೇಶದ ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದ್ದು, ರಾಗಿ, ಗೋಧಿ, ಭತ್ತ, ದ್ವಿದಳ ಧಾನ್ಯಗಳು, ನಗದು ಬೆಳೆಗಳೆನಿಸಿದ ಕಬ್ಬು, ತಂಬಾಕು ಸೇರಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅಲ್ಲದೆ, ಕರಿ ಮೆಣಸು, ಏಲಕ್ಕಿ, ಶುಂಟಿ, ಬೆಳ್ಳುಳ್ಳಿ ಸೇರಿ ವಿವಿಧ ಮಸಾಲೆ ಪದಾರ್ಥಗಳನ್ನು ಬೇರೆ ರಾಜ್ಯ, ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

ಬೆಳಗಾವಿ ನಗರವು ಉದ್ಯಮ ಬೆಳವಣಿಗೆ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ. ಹೈಡ್ರಾಲಿಕ್ಸ್ ಉದ್ಯಮ ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿದೆ. ನಗರವು ವ್ಯವಸ್ಥಿತವಾಗಿ ಎಲ್ಲ ಅನುಕೂಲತೆ, ಅವಕಾಶಗಳು ಕಲ್ಪಿಸಿಕೊಡುವಲ್ಲಿ ಯಶಸ್ಸು ಸಾಧಿಸಿದೆ. ಬೆಳವಣಿಗೆ ರಂಗದಲ್ಲಿ ರಾಜ್ಯದ ಎರಡನೆಯ ರಾಜಧಾನಿಯಾಗಿ ಹೊರ ಹೊಮ್ಮಿದೆ. ಹೀಗಾಗಿ ಬೆಳಗಾವಿ ಕೃಷಿ, ಉದ್ಯಮ ಹಾಗೂ ವ್ಯಾಪಾರ ಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಎನ್‌ಐಎಫ್‌ಟಿಇಎಂ ಸ್ಥಾಪನೆ ಮಾಡುವಂತೆ ಮನವಿ ಮೂಲಕ ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ಕೇಂದ್ರದ ಆಹಾರ ಸಂಸ್ಕರಣಾ ಉದ್ಯಮ ಸಚಿವ ಚಿರಾಗ ಪಾಸ್ವಾನ್ ಅವರು, ರೈತರಿಗೆ, ಉದ್ಯಮದಾರರಿಗೆ, ಗ್ರಾಹಕರಿಗೆ ಎಲ್ಲ ಮದ್ಯಸ್ಥಗಾರರಿಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಎನ್‌ಐಎಫ್‌ಟಿಇಎಂ ಸ್ಥಾಪಿಸುವ ಭರವಸೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.