ನಿಡಗುಂದಿಯ ವಾಲ್ಮೀಕಿ ಭವನದಲ್ಲಿ ಪಟ್ಟಣ ಪಂಚಾಯಿತಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಿದ್ದಣ್ಣ ನಾಗಠಾಣ, ಎಸ್.ಕೆ.ಗೌಡರ ಇತರರಿದ್ದರು. 
ಜಿಲ್ಲೆ

ಪೌರ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಧರಿಸಲಿ

ನಿಡಗುಂದಿ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪೌರ ಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಲಮಾಣಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಪಟ್ಟಣ ಪಂಚಾಯಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭವಾಗಿದ್ದು ಭೂಸೇನಾ ಸೈನಿಕರಿದ್ದಂತೆ. ಎಂತಹ ಸಂದಿಗ್ಧ ಪರಿಸ್ಥಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಚತಾ ಕಾರ್ಯ ಮಾಡುತ್ತಾರೆ. ಅವರ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರದ ಮೇಲಿದೆ ಎಂದರು.

ಶಿಕ್ಷಣಪ್ರೇಮಿ ಸಿದ್ದಣ್ಣ ನಾಗಠಾಣ, ಪಪಂ ಮಾಜಿ ಉಪಾಧ್ಯಕ್ಷ ಶಂಕರಲಿಂಗಪ್ಪ ಗೌಡರ, ಪಪಂ ಸದಸ್ಯ ಪ್ರಲ್ಹಾದ ಪತ್ತಾರ ಮಾತನಾಡಿ, ಪರಿಸರ ಸ್ವಚ್ಛತೆಯ ಜತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದೆ. ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು. ನಾವು ಕಣ್ಣುಬಿಡುವ ಮೊದಲೇ ಪಟ್ಟಣವನ್ನು ಸ್ವಚ್ಚಗೊಳಿಸಿ ಮನಸ್ಸಿಗೆ ಮುದ ನೀಡುವ ಕಾರ್ಮಿಕರಿಗೆ ನಾವು ಏನು ಕೊಟ್ಟರೂ ಕಡಿಮೆಯೇ ಆಗಿದೆ. ಏನು ಕೊಡದಿದ್ದರೂ ಪರವಾಗಿಲ್ಲ ಕನಿಷ್ಠ ಗೌರವ ಕೊಡಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಪೌರ ಕಾರ್ಮಿಕರಿಲ್ಲದಿದ್ದರೆ ಪಟ್ಟಣದ ನಾಗರಿಕರು ಆ ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗುರುತಿಸಬೇಕು. ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ನಬಿರಸೂಲ ಬಾಣಕಾರ, ಹನುಮಂತ ಗುಂಡಿನಮನಿ, ಗಣೇಶ ಕೂಚಬಾಳ, ಬಸವರಾಜ ವಂದಾಲ, ಶರಣಮ್ಮ ವಾರದ, ದಾವಲಮಾ ಪೆಂಡಾರಿ, ಮುಖಂಡರಾದ ಲಕ್ಷ್ಮಣ ವಿಭೂತಿ, ಬಸವರಾಜ ಗೌಡರ, ಸುರೇಶ ಸಣ್ಣಮಣಿ, ಪಪಂ ಜೆಇ ಸಂಜು ಹೊಸಮನಿ, ರೋಷನಬಿ ಮುಲ್ಲಾ, ಕಿರಿಯ ಆರೋಗ್ಯ ನಿರೀಕ್ಷಕ ಮನೋಹರ ಅಜಮಣಿ, ಎನ್.ಬಿ.ಮುಳೂರ, ಮಲ್ಲು ಬ್ಯಾಲಾಳ, ಮಂಜು ಕರಾಬಿ, ರುದ್ರು ಮುಗಳೊಳ್ಳಿ ಹಾಗೂ ಪಪಂ ಸಿಬ್ಬಂದಿ ಇತರರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರು ಪೌರ ಕಾರ್ಮಿಕರನ್ನು ಸನ್ಮಾನಿಸಿ ಪ್ರೋತ್ಸಾಹಧನ ಚೆಕ್ ವಿತರಣೆ ಮಾಡಿದರು.