ಮುತ್ತು ಕುಪ್ಪಸ್ತ ನಿಡಗುಂದಿ
ಸ್ಥಳೀಯ ಪಟ್ಟಣ ಪಂಚಾಯಿತಿ ಗದ್ದುಗೆಗೆ ಇಂದು ಚುನಾವಣೆ, ಯಾರ ವಿರುದ್ಧ ಯಾರ ಸ್ಪರ್ಧೆ, ವಿಜಯದ ಮಾಲೆ ಯಾರ ಕೊರಳಿಗೆ, ಶುಭ ಶುಕ್ರವಾರ ಕೈ ಪಕ್ಷದ್ದಾ, ಕಮಲ ಪಕ್ಷದ್ದಾ...! ಮೀಸಲಾತಿ ಗೊಂದಲದಿಂದಾಗಿ 22 ತಿಂಗಳಿಂದ ಖಾಲಿಯಿದ್ದ ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನ. 6 ರಂದು ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆಯಲಿದ್ದು, ಯಾವ ಪಕ್ಷದವರು ಗದ್ದುಗೆ ಹಿಡಿಯಲಿದ್ದಾರೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದ್ದು, ಶುಕ್ರವಾರ ಮಧ್ಯಾಹ್ನದೊಳಗೆ ಎಲ್ಲ ಚಿತ್ರಣ ಹೊರಬೀಳಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದೆ. 16 ಸದಸ್ಯ ಬಲದ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ 8, ಬಿಜೆಪಿಯ 6, ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಚುನಾವಣೆಗೆ ಸಂಸದ ಹಾಗೂ ಶಾಸಕರ ಮತಗಳು ಸೇರಲಿದ್ದು, ನಿರ್ಣಾಯಕ ಪಾತ್ರವಾಗಲಿವೆ. ಮೀಸಲಾತಿಯನ್ವಯ ಕೈ ಪಕ್ಷದಲ್ಲಿ ಪರಿಶಿಷ್ಟ ವರ್ಗದಲ್ಲಿ ಓರ್ವ ಮಹಿಳೆ ಇದ್ದು, ಜತೆಗೆ ಕಳೆದ ಬಾರಿ ಬೆಂಬಲಿಸಿದ ಪಕ್ಷೇತರ ಮಹಿಳಾ ಸದಸ್ಯೆ ಇದ್ದಾರೆ. ಮೊದಲ ಅವಧಿಗೆ ವಾರ್ಡ್ ನಂ. 12ರ ಪಕ್ಷೇತರ ಸದಸ್ಯೆ ನೀಲಮ್ಮ ದೊಡಮನಿ ಅವರ ಮತ ಪಡೆದು ಅಧಿಕಾರ ಹಿಡಿದ ಕೈ ಪಕ್ಷ ಈ ಬಾರಿ ಅವರನ್ನೇ ಸ್ಪರ್ಧೆಗಿಳಿಸುವ ಲೆಕ್ಕಾಚಾರ ಗಟ್ಟಿಯಾಗಿ ಕೇಳಿಬರುತ್ತಿವೆ. ಕಮಲ ಪಕ್ಷದಿಂದ ಸಾಮಾನ್ಯ ಮಹಿಳೆ ವರ್ಗದಲ್ಲಿ ಓರ್ವ ಹಾಗೂ ಮೂವರು ಹಿಂದುಳಿದ ಅ ವರ್ಗದ ಸದಸ್ಯರಿದ್ದು, ಶಿವಲೀಲಾ ಗೂಗಿಹಾಳ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಆದರೆ, ಎರಡೂ ಪಕ್ಷದಿಂದ ಒಮ್ಮತದ ಅಭ್ಯರ್ಥಿಗಳು ಯಾರೆಂದೂ ತಿಳಿದಿಲ್ಲ.
8 ಸ್ಥಾನ ಗಳಿಸಿದ ಕೈ ಪಕ್ಷಕ್ಕೆ ಮೊದಲ ಅವಧಿಯಲ್ಲಿ ಗೆಲುವಿನ ಹಾದಿ ಸುಲಭವಾಗಿತ್ತು. ಆದರೆ, 18 ತಿಂಗಳ ನಂತರ ರಾಜೀನಾಮೆ ಸಲ್ಲಿಸಿದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಕೈ ಪಕ್ಷದಲ್ಲೇ ಶಂಕರ ರೇವಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು 6 ಬಿಜೆಪಿ, ಓರ್ವ ಪಕ್ಷೇತರ ಮತ ಪಡೆದು ಸೋಲುಂಡರು. ಬಂಡಾಯ ಅಭ್ಯರ್ಥಿಯಾಗಿ ಗಾಯ ಮಾಡಿಕೊಂಡ ಶಂಕರ ರೇವಡಿ ಮತ ಈ ಬಾರಿ ಯಾರಿಗೆ ದೊರೆಯಲಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಕಳೆದ ಅವಧಿಯಲ್ಲಿ ಕೈ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿದ ಕಮಲ ಸದಸ್ಯರು ಈ ಬಾರಿ ಅವರ ಮತ ಪಡೆಯಲು ಭಾರಿ ಕಸರತ್ತು ನಡೆಸುತ್ತಿದ್ದರೆ, ಇತ್ತ ಕೈ ಸದಸ್ಯರು ಹಳೇ ಗಾಯಕ್ಕೆ ಮುಲಾಮು ಹಚ್ಚಲು ಮುಂದಾಗಿದ್ದಾರೆ. 6 ಸದಸ್ಯರನ್ನು ಹೊಂದಿದ ಕಮಲ ಇಬ್ಬರು ಪಕ್ಷೇತರ, ಸಂಸದರ ಮತ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ. ಏತನ್ಮಧ್ಯೆ ಕೈ ಪಕ್ಷದಿಂದ ಪಕ್ಷೇತರ ಸದಸ್ಯೆ ನೀಲಮ್ಮ ದೊಡಮನಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇರುವುದರಿಂದ ಬಿಜೆಪಿ ತಂತ್ರಕ್ಕೆ ಹಿನ್ನಡೆಯಾಗಲಿದೆ.