ಜಿಲ್ಲೆ

ಚಿರತೆ ಸೆರೆಗಾಗಿ ಬೋನು ಇಟ್ಟ ಅರಣ್ಯ ಇಲಾಖೆ

Davangere - Desk - Basavaraja P

ನ್ಯಾಮತಿ: ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬುಧವಾರ ಒಡೆಯರ ಹತ್ತೂರು ಗ್ರಾಮದ ತುಂಗನಾಲೆ ಬಳಿ ಬೋನು ಇರಿಸಿದೆ.

ಕಾಡಂಚಿನ ಕುಂಕುವ, ಗಡೇಕಟ್ಟೆ, ಒಡೆಯರ ಹತ್ತೂರು, ಕಂಕನಹಳ್ಳಿ ಮತ್ತು ಗಂಗನಕೋಟೆ ಗ್ರಾಮಗಳ ತುಂಗಾನಾಲೆ ದಂಡ ಎಡ ಮತ್ತು ಬಲ ಆಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು. ಸ್ಥಳಕ್ಕೆ ತೆರಳಿ ಬೋನು ಇರಿಸಿ ಕಾರ್ಯಾಚರಣೆ ಮಾಡಿರುವುದಾಗಿ ಹೊನ್ನಾಳಿ ವಲಯ ಅರಣ್ಯಾಧಿಕಾರಿ ಬಿ. ಕಿಶೋರ ನಾಯ್ಕ ಮಾಹಿತಿ ನೀಡಿದ್ದಾರೆ.

ಈಗಾಗಲೆ ತಾಲೂಕಿನ ಮೂರು ಕಡೆ ಈಗಾಗಲೆ ಚಿರತೆ ಸೆರೆಗಾಗಿ ಬೋನು ಇರಿಸಲಾಗಿದ್ದು, ಕೃಷಿಕರು ಮುಂಜಾನೆ ಹಾಗೂ ಸಂಜೆ ವೇಳೆ ಕೃಷಿ ಚಟುವಟಿಕೆ ಮತ್ತಿತರ ಕಾರ್ಯಗಳಿಗೆ ಒಂಟಿಯಾಗಿ ಓಡಾಡದಂತೆ ಎಚ್ಚರಿಕೆಯಿಂದಿರಬೇಕು. ಚಿರತೆ ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಎಂ.ಬಿ.ಬರ್ಕತ್ ಅಲಿ, ಗಸ್ತು ಅರಣ್ಯಪಾಲಕರಾದ ಎಚ್.ಪಿ.ಅಂಜಲಿ, ನಾಗಲಿಂಗಪ್ಪ, ಬಸವರಾಜಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಲೇಶಪ್ಪ ಇತರರಿದ್ದರು.