ಸಾಂದರ್ಭಿಕ ಚಿತ್ರ 
ಜಿಲ್ಲೆ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಬಜಪೆ ಠಾಣೆಗೆ ಎನ್‌ಐಎ ಅಧಿಕಾರಿಗಳು

ಮಂಗಳೂರು : ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಬಜಪೆ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಿಚಾರಣೆ ನಡೆಸಿದ್ದಾರೆ.
ಡಿವೈಎಸ್ಪಿ ರಾಜೀವ್ ಸಿಂಗ್, ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಅಧಿಕಾರಿಗಳ ತಂಡ ಬಜಪೆ ಪೊಲೀಸ್ ಠಾಣೆಗೆ ಆಗಮಿಸಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎನ್ನುವ ಮಾಹಿತಿ ಆಧಾರಲ್ಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದೆ. ಕಳೆದ ವರ್ಷ 2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಟ್ಟೆ ಠಾಣೆ ವ್ಯಾಪ್ತಿಯ 14 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಒಯ್ದಿದ್ದರು. ಇದೀಗ ತಂಡ ಮತ್ತೆ ಆಗಮಿಸಿ ತನಿಖೆ ಮುಂದುವರಿಸಿದೆ.
2025 ರ ಮೇ 1ರಂದು ಬಜಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ಸೇರಿ 12 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ವಹಿಸಲಾಗಿತ್ತು. ಪ್ರಕರಣದಲ್ಲಿ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ತನಿಖೆಗೆ ಒಳಪಡಿಸಲಾಗಿತ್ತು.
ಬಜಪೆ ಠಾಣೆ ವ್ಯಾಪ್ತಿಯ 10 ಕಡೆ ಹಾಗೂ ಸುರತ್ಕಲ್ ಠಾಣೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಕೊಲೆ ಆರೋಪಿಗಳ ಮನೆ ಹಾಗೂ ಎಸ್ ಡಿಪಿಐ ಮುಖಂಡರ ಮನೆಗಳಿಗೆ ದಾಳಿ ನಡೆಸಿದ್ದರು. ವಶಕ್ಕೆ ಪಡೆದಿದ್ದ ಹಲವು ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ವರ್ಷದ ನಂತರ ತನಿಖೆ ಚುರುಕುಗೊಳಿಸಿದ್ದಾರೆ.