ಮಡಿಕೇರಿ:
ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರ ಮುಷ್ಕರ ಮುಂದುವರಿದಿರುವುದರಿಂದ ಜಿಲ್ಲೆಯಲ್ಲೂ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಉಂಟಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡರೋಗಿಗಳು ಸೂಕ್ತ ಸ್ಪಂದನೆ ಇಲ್ಲದೆ ಪರಿತಪಿಸುವಂತಾಗಿದೆ. ಈ ಮಧ್ಯೆ ತಮ್ಮನ್ನು ಕಾಯಂ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರವನ್ನು ಸಾರ್ವಜನಿಕರು ಬೆಂಬಲಿಸುವಂತೆ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರ ಸಂಘ ಮನವಿ ಮಾಡಿದೆ.
ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳ ಈಡೇರಿಕೆಗೆ ಈತನಕ ಮನವಿ ಮಾಡಿಕೊಂಡು ಬರುತ್ತಿದ್ದ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರು, ಯಾವುದೇ ಫಲ ಸಿಗದಿದ್ದಾಗ ಈಗ ತಮ್ಮ ಸೇವೆ ಕಾಯಂ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಫೆ. ೧೩ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಯುತ್ತಿದ್ದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩೦ ಸಾವಿರಕ್ಕೂ ಅಧಿಕ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರು ಈ ಮುಷ್ಕರವನ್ನು ಬೆಂಬಲಿಸಿ ಹೋರಾಟಕ್ಕೆ ಇಳಿದಿದ್ದಾರೆ. ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಡಿ ಗ್ರೂಪ್ ನೌಕರರಿಂದ ವೈದ್ಯರ ತನಕ ೧೮೨ ವಿವಿಧ ಹುದ್ದೆಗಳಲ್ಲಿ ಒಳಗುತ್ತಿಗೆ ನೌಕರರು ಇದ್ದಾರೆ. ದಾದಿ, ಲ್ಯಾಬ್ ತಂತ್ರಜ್ಞರು, ಸಮುದಾಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತಿತರ ಕಡೆಗಳಲ್ಲಿ ಸುಮಾರು ೪೬ ಮಾದರಿಯ ವಿವಿಧ ಹುದ್ದೆಗಳಲ್ಲಿ ೩೫೪ ಮಂದಿ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿಯೇ ಈಗ ಮುಷ್ಕರ ನಡೆಯುತ್ತಿರುವುದರಿಂದ ಸಾಮಾನ್ಯ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ.
ಕೊಡಗಿನಲ್ಲಿ ವೈದ್ಯರು, ದಾದಿಯರು ಸೇರಿದಂತೆ ಕಾಯಂ ವೈದ್ಯಕ್ಯೀಯ ಸಿಬ್ಬಂದಿಯ ಕೊರತೆ ಇದೆ. ಬಹಳ ಹಿಂದಿನಿಂದಲೂ ಜಿಲ್ಲೆಯನ್ನು ಕಾಡುತ್ತಿದ್ದ ಈ ಸಮಸ್ಯೆಗೆ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರ ನೇಮಕದಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಿತ್ತು. ಆದರೆ ಇದೀಗ ಅವರು ಮುಷ್ಕರದಲ್ಲಿ ಭಾಗವಹಿಸಿರುವುದರಿಂದ ರೋಗಿಗಳ ಆರೈಕೆಯಲ್ಲಿ ಸಮಸ್ಯೆ ಕಂಡುಬಂದಿದೆ. ಬದಲಿ ವ್ಯವಸ್ಥೆಗಳನ್ನು ಮಾಡಿಕೊಂಡಿರುವುದರಿಂದ ಮುಷ್ಕರದ ದುಷ್ಪರಿಣಾಮ ಆಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೂ ರೋಗಿಗಳು ಪರದಾಟ ಆಸ್ಪತ್ರೆಗಳಲ್ಲಿ ಕಂಡುಬರುತ್ತಿದೆ.
ಇಂದಲ್ಲ ನಾಳೆ ಸರಕಾರ ತಮ್ಮನ್ನು ಕಾಯಂ ಮಾಡಬಹುದು ಎನ್ನುವು ನಿರೀಕ್ಷೆಯಲ್ಲೇ ಸೇವೆ ಸಲ್ಲಿಸುತ್ತಿರುವ ಎನ್‌ಹೆಚ್‌ಎಮ್ ಒಳಗುತ್ತಿಗೆ ನೌಕರರಲ್ಲಿ ಬಹುತೇಕರು ಈಗಾಗಲೇ ತಮ್ಮ ಅರ್ಧ ಆಯುಷ್ಯ ಮುಗಿಸಿದ್ದಾರೆ. ಮಣಿಪುರ, ರಾಜಸ್ಥಾನದಲ್ಲಿ ಎನ್‌ಹೆಚ್‌ಎಂ ನೌಕರರನ್ನು ಕಾಯಂ ಮಾಡಲಾಗಿದೆ. ಪಂಜಾಬ್, ಒರಿಸ್ಸಾ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ಕಾಯಂ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದಲ್ಲೂ ತಮ್ಮ ಸೇವೆ ಕಾಯಂ ಮಾಡಬೇಕು ಎನ್ನುವುದು ಈ ನೌಕರರ ಬೇಡಿಕೆ. ಸರಕಾರ ಇತ್ತೀಚೆಗೆ ಶೇ.೧೫ರಷ್ಟು ವೇತನ ಹೆಚ್ಚಳ ಮಾಡಿದೆ. ಆದರೆ ಇದು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಈ ನೌಕರರು ಅಳಲು ತೋಡಿಕೊಳ್ಳುತ್ತಾರೆ.
ಅತ್ಯಂತ ಕನಿಷ್ಠ ವೇತನಕ್ಕೆ ನಾವುಗಳು ಕೆಲಸ ಮಾಡುತ್ತಿದ್ದೇವೆ. ೨ ದಶಕಗಳ ಹಿಂದೆ ನಾವುಗಳು ಸೇವೆಗೆ ಸೇರಿದ್ದರೂ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಸರಕಾರ ಈಗಲಾದರೂ ನಮ್ಮನ್ನು ಕಾಯಂ ಮಾಡುವ ಕಡೆಗೆ ಮನಸ್ಸು ಮಾಡಬೇಕು.
ಎಂ. ಮಹದೇವಪ್ಪ, ಅಧ್ಯಕ್ಷ, ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರ ಸಂಘ, ಕೊಡಗು
ಈ ಸರಕಾರ ನಮ್ಮನ್ನು ಕಾಯಂ ಮಾಡಿದರೆ ಆಡಳಿತ ನಡೆಸುವವರು ನಮಗೆ ದೇವರಾಗಿ ಬಿಡುತ್ತಾರೆ. ಇವರನ್ನು ಫೋಟೋ ಇಟ್ಟು ಮನೆಯಲ್ಲಿ ಪೂಜೆ ಮಾಡುತ್ತೇವೆ. ಏಕೆಂದರೆ ಈಗ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕಾಯಂ ನೌಕರರಿಗೂ ನಮಗೂ ವೇತನದಲ್ಲಿ ತಾಳಮೇಳವೇ ಇಲ್ಲ. ಸಾರ್ವಜನಿಕರು ನಮ್ಮ ಹೋರಾಟ ಬೆಂಲಿಸುವಂತೆ ಕೇಳಿಕೊಳ್ಳುತ್ತೇವೆ.
ರಘು, ಕಾರ್ಯದರ್ಶಿ, ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರ ಸಂಘ, ಕೊಡಗು
ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಭಟನೆಯಿಂದ ನರ್ಸಿಂಗ್ ಸೇವೆಗಳಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿದೆ. ಉಳಿದಂತೆ ಇರುವ ಸಿಬ್ಬಂದಿ ಬಳಸಿಕೊಂಡು ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೆಲವು ಎನ್‌ಹೆಚ್‌ಎಂ ಒಳಗುತ್ತಿಗೆ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದರೂ ಕರ್ತವ್ಯಕ್ಕೆ ಬರುತ್ತಿದ್ದಾರೆ.
ಡಾ. ಕೆ.ಎಂ. ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ