ಜಿಲ್ಲೆ

ಪ್ರತಿಭಟನೆ ಕೈಬಿಟ್ಟ ಶುಶ್ರೂಷಕಿಯರು - ಆರೋಗ್ಯ ಸಚಿವರ ಭರವಸೆ

ಪಂಕಜ ಕೆ.ಎಂ.

ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ 4-5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರು ಧರಣಿ ಕೈಬಿಟ್ಟಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರ ಮನವೊಲಿಸಿದರು. ಎನ್‌ಎಚ್‌ಎಂ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು, ವೇತನ ಹೆಚ್ಚಳ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾ.10ರಂದು ಸಭೆ ನಡೆಸಿ, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಶುಶ್ರೂಷಕಿಯರ ನೇಮಕಾತಿ ವೇಳೆ ಎನ್‌ಎಚ್‌ಎಂ ಅಡಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೃಪಾಂಕ ನೀಡುವ ಮೂಲಕ ಆದ್ಯತೆ ನೀಡಲಾಗುವುದು. ಅಲ್ಲದೇ ಅಂತರ್ಜಿಲ್ಲಾ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸುವುದಾಗಿ ಹೇಳಿದ ಸಚಿವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಶುಶ್ರೂಷಕಿಯರು ಪ್ರತಿಭಟನೆ ಹಿಂಪಡೆದಿದ್ದಾರೆ.