ಜಿಲ್ಲೆ

ಎನ್‌ಎಚ್‌ಎಂ-ಎನ್‌ಯುಎಚ್‌ಎಂ ಸಿಬ್ಬಂದಿ ಸೇವೆ ಮುಂದುವರಿಸಲು ಆಗ್ರಹ

ಪಂಕಜ ಕೆ.ಎಂ.

ಬೆಂಗಳೂರು: ಮೌಲ್ಯಮಾಪನ ಹೆಸರಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ- ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ- ಎನ್‌ಯುಎಚ್‌ಎಂ) ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಕೈಬಿಡುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಆಗ್ರಹಿಸಿದೆ.

ಅನುದಾನ ಉಳಿಸುವ ಸಲುವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮೌಲ್ಯಮಾಪನ ಕ್ರಮ ಕೈಗೊಂಡಿದ್ದು, ಇದರಿಂದ 15-18 ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಅನ್ಯಾಯವಾಗಲಿದೆ. ಆರ್ಥಿಕ ಸಂಕಷ್ಟದಿಂದ ಅವರ ಕುಟುಂಬಗಳು ಬೀದಿಗೆ ಬೀಳಲಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಎನ್‌ಎಚ್‌ಎಂ- ಎನ್‌ಯುಎಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯನ್ನು ಪ್ರಸಕ್ತ (2025-26) ಸಾಲಿಗೆ ಕೆಲಸದಲ್ಲಿ ಮುಂದುವರಿಸುವಂತೆ ಕೂಡಲೇ ಆದೇಶ ಹೊರಡಿಸಬೇಕು. ಮೌಲ್ಯಮಾಪನದ ಪ್ರಕ್ರಿಯೆ ರದ್ದುಪಡಿಸಬೇಕು. ದೀರ್ಘಕಾಲ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ತೆಗೆಯದಂತೆ ಕ್ರಮವಹಿಸಬೇಕು. ಈಗಾಗಲೆ ಕೈಬಿಟ್ಟಿರುವ ರಾಷ್ಟ್ರೀಯ ಬಾಲಸುರಕ್ಷಾ ಕೇಂದ್ರದ 24 ತಂಡಗಳನ್ನು ಹಾಗೂ ಈಗಾಗಲೆ ಸೇವೆಯಿಂದ ಬಿಡುಗಡೆಗೊಳಿಸಿರುವ ಾರ್ಮಸಿಸ್ಟ್‌ಗಳನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಬೇಕು. ಇ-ಆಸ್ಪತ್ರೆಯ ಡಿಇಒಗಳನ್ನು ಎನ್‌ಎಚ್ ಎಂ ಅಡಿಯಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

ಅದೇ ರೀತಿ ಆಶಾ ಮೆಂಟರ್‌ಗಳನ್ನು ಸೇವೆಯಲ್ಲಿ ಮುಂದುವರಿಸಬೇಕು. ಶೇ. 15 ವೇತನ ಹೆಚ್ಚಳದ ಪ್ರಸ್ತಾವನೆ ಅನ್ವಯ ಅನುದಾನ ಬಿಡುಗಡೆಗೆ ಸೂಚನೆ ನೀಡಬೇಕು. ಸಿಬ್ಬಂದಿಗಳಿಗೆ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ಕೃಪಾಂಕ, ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ಹಾಗೂ ಕುಟುಂಬದವರಿಗೆ ಆರೋಗ್ಯ ವಿಮೆ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋರಿದ್ದಾರೆ.