ಜಿಲ್ಲೆ

ಆರೋಗ್ಯ ನೌಕರರ ಸಂಘದ ವತಿಯಿಂದ ಫೆ 15 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ: ಮಹೇಶ ಭಜಂತ್ರಿ

Gadag - Shivanand Hiremath

ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ನೌಕರರ ಸಂಘದ ವತಿಯಿಂದ ಫೆ 15 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಭಜಂತ್ರಿ ಹೇಳಿದರು. 

ಅವರು ಶನಿವಾರ ಪ್ರತಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿರುವ ಕ್ಷೇಮ ಕೇಂದ್ರದಲ್ಲಿ ಕಳೆದ 7 ವರ್ಷಗಳಿಂದದ ಕಾರ್ಯ ನಿರ್ವಹಿಸುತ್ತಿದ್ದರೂ ಯಾವುದೇ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ.

ನಮ್ಮ ಸಂಘಟನೆಯ ವತಿಯಿಂದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ರಾಷ್ಟ್ರೀಯ ಆರೋಗ್ಯ ಅಭಿಮಾನದ ನಿರ್ದೇಶಕರು, ಆರೋಗ್ಯ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಈಗ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆಸಲಾಗುತ್ತಿದೆ. 

ಫೆ 15 ರಂದು ನಡೆಯುವ ಮುಷ್ಕರದಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳಿಂದ 6192 ಸಿಬ್ಬಂದಿಗಳು ಪಾಲ್ಗೊಳ್ಳುತ್ತಿದ್ದು, ಗದಗ ಜಿಲ್ಲೆಯಿಂದ 116 ಜನರು ಪಾಲ್ಗೊಳ್ಳುತ್ತೇವೆ ಎಂದ ಅವರು, ಸಿಪಿಎಚ್ಸಿ-ಯುಎಚ್ಸಿ ಮಾರ್ಗಸೂಚಿಗಳ ಅನ್ವಯ 6 ವರ್ಷ ಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆಯನ್ನು ಖಾಯಂಗೊಳಿಸಬೇಕು. ತಡೆ ಹಿಡಿದಿರುವ ಶೇ 5 ವಾರ್ಷಿಕ ವೇಚ ಮತ್ತು ಶೇ 10 ಲಾಯಾಲಿಟಿ ಬೋನಸ್ ನೀಡುವುದು ಸೇರಿದಂತೆ 11 ಪ್ರಮುಖ ಬೇಡಿಕೆಗಳ ಈಡೇರಿಕೆಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಡಿಯಪ್ಪ‌ ಮಾದರ, ಖಚಾಂಚಿ ಪಿ.ಹರೀಶ, ತಾಯಪ್ಪ ತಳಗೇರಿ ಮುಂತಾದವರು ಹಾಜರಿದ್ದರು.