ಎನ್‌ಜಿಒಗಳು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುತ್ತವೆ. ಸರ್ಕಾರ ಮಾಡಲಾಗದ ಕೆಲಸಗಳನ್ನು ಅನುಷ್ಠಾನಗೊಳಿಸಿ ನೆರವಾಗುತ್ತವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಗೌರಿಶಂಕರನಗರದಲ್ಲಿ ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರದ (ಕ್ರೆಡಿಟ್‌ಐ) ವನಜಾಕ್ಷಿ ವರ್ಷ ಮಹಿಳಾ ಮತ್ತು ಯುವ ಸಬಲೀಕರಣ ಕೇಂದ್ರ ಹಾಗೂ ಮನೋಲ್ಲಾಸ ಆಪ್ತ ಸಮಾಲೋಚನಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಬಲೀಕರಣ ಹಾಗೂ ಯುವಜನರಿಗೆ ಸಹಕಾರ ನೀಡಲು ಎನ್‌ಜಿಒಗಳು ಮುಂದಾಗಬೇಕು. ಹೊಸ ಜವಾಬ್ದಾರಿಗಳನ್ನು ತೆಗೆದುಕೊಂಡು ಶೋಷಿತರು, ಅವಕಾಶ ವಂಚಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಂಸ್ಥೆಗಳು ಮಾಡಬೇಕು. ಅದಕ್ಕೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎಂ.ಪಿ.ವರ್ಷ ಮಾತನಾಡಿ, ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಮಾನಸಿಕ, ದೈಹಿಕವಾಗಿ ವಿಭಿನ್ನ ರೀತಿಯ ಸಮಸ್ಯೆಗಳಿಗೆ ಸಿಲುಕಿರುವ ಮಹಿಳೆಯರು, ಯುವಜನ ಮತ್ತು ವಿದ್ಯಾರ್ಥಿಗಳಿಗೆ ಪರಿಣತರಿಂದ ಆಪ್ತ ಸಮಾಲೋಚನೆ ದೊರಕಲಿದೆ. ಈ ಎಲ್ಲ ಸೇವೆಗಳೂ ಉಚಿತವಾಗಿ ದೊರಕಲಿವೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯಗಳು ಕೇವಲ ಪ್ರಮಾಣಪತ್ರ ನೀಡುವ ಉದ್ಯಮಗಳಾಗಿವೆ. ಪದವೀಧರರಾಗಿದ್ದರೂ ಯುವ ಸಮುದಾಯಕ್ಕೆ ಕೆಲಸ ಸಿಗುತ್ತಿಲ್ಲ. ಮಹಿಳೆಯರು ಆರ್ಥಿಕತೆಯ ಆಸ್ತಿಯಾಗಿ ಸಮಾಜ ನೋಡೇ ಇಲ್ಲ. ಕೆಲಸದ ಭಾಗವಾಗಿ ಮಾತ್ರ ನೋಡಲಾಗಿದೆ. ಅವರಿಗೆ ಸ್ವಾವಲಂಬನೆಯ ದಾರಿ ತೋರುವುದು ಇಂದಿನ ಅಗತ್ಯವಾಗಿದೆ ಎಂದರು.
ಮನೋವಿಜ್ಞಾನಿ ಡಾ.ಮನೋನ್ಮಣಿ, ಸಂಸ್ಥೆಯ ಖಜಾಂಚಿ ಎಂ.ಆರ್.ಮಂಜುನಾಥ್, ಪ್ರೊ.ಎಚ್.ಎಂ.ವಸಂತಮ್ಮ, ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ನಿವೃತ್ತ ಕೆಎಎಸ್ ಅಧಿಕಾರಿ ಕೃಷ್ಣಪ್ರಸಾದ್ ಇದ್ದರು.