ಜಿಲ್ಲೆ

ಎನ್ ಜಿ ಇ ಎಫ್ ಕಾರ್ಯಕ್ಕೆ ಸಚಿವರ ಮೆಚ್ಚುಗೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ (ಎನ್ ಜಿ ಇ ಎಫ್) ವಿದ್ಯುತ್ ಪರಿವರ್ತಕಗಳ (ಟಿಸಿ) ಉತ್ಪಾದನೆಯಲ್ಲಿ ಹೊಸ ಭಾಷ್ಯ ಬರೆದಿದ್ದು, ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ರೈಲ್ವೆ ಯೋಜನೆಗಳಿಗೆ ಸುಮಾರು 14 ಟಿಸಿಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಭಟಿಂದಾದಲ್ಲಿರುವ ಕಂಪನಿಯ ಶಾಖೆಯಲ್ಲಿ ತಯಾರಿಸಲಾದ ಟಿಸಿಗಳನ್ನು ಹುಬ್ಬಳ್ಳಿ ಮುಖ್ಯ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ಷಮತೆ ಪರೀಕ್ಷೆ ಮಾಡಿ ಗುಜರಾತ್ ಗೆ ಟಿಸಿ ಕಳುಹಿಸಿಕೊಡಲಾಗುತ್ತಿದೆ. ಕಂಪನಿಯ ಈ ಸಾಧನೆಯು ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಕೈಗಾರಿಕೆ ಇಲಾಖೆ ಅಡಿ ಬರುವ ಎನ್ ಜಿ ಇ ಎಫ್ ಕಾರ್ಖಾನೆಯಲ್ಲಿ ಸರ್ಕಾರ ಸುಧಾರಣಾ ಕ್ರಮ ಕೈಗೊಂಡಿದ್ದರ ಲವಾಗಿ ಉತ್ತಮ ಸಾಧನೆ ಆಗುತ್ತಿದೆ ಎಂದು ಸಚಿವರು ಪ್ರಶಂಸಿಸಿದ್ದಾರೆ.

ಎನ್ ಜಿ ಇ ಎಫ್ ನಿಂದ ತಯಾರಾಗುತ್ತಿರುವ ಟಿಸಿಗಳ ಬಗ್ಗೆ ವಿಜಯವಾಣಿ ಪತ್ರಿಕೆಯು ಭಾನುವಾರ "ಪರೀಕ್ಷೆಗಾಗಿ ಹುಬ್ಬಳ್ಳಿಗೆ ಬರುತ್ತಿವೆ 9 ಟಿಸಿ' ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಪ್ರಸ್ತಾಪಿಸಿ ಸಚಿವರು ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.