ಹುಬ್ಬಳ್ಳಿ: ಇದೇ ಮೊದಲ ಬಾರಿ ಬೃಹತ್ ಗಾತ್ರ ಹಾಗೂ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಉತ್ಪಾದನೆ ಮಾಡಿ ಅವುಗಳನ್ನು ತನ್ನ ಗ್ರಾಹಕರಿಗೆ ಕಳುಹಿಸಿಕೊಡುವಲ್ಲಿ ಇಲ್ಲಿಯ ಎನ್ ಜಿಇಎಫ್ ಯಶಸ್ವಿಯಾಗಿದೆ.
ಗುಜರಾತ್‌ನ ಬೃಹತ್ ರೈಲ್ವೆ ಯೋಜನೆಗೆ ಅಗತ್ಯವಾದ ಐದು ಟಿಸಿಗಳನ್ನು ಬುಧವಾರ ಸಮಗ್ರ ಪರೀಕ್ಷೆಗೆ ಒಳಪಡಿಸಿ ಯಶಸ್ವಿಯಾದ ನಂತರ ದೊಡ್ಡ ಲಾರಿಯಲ್ಲಿ ಕಳುಹಿಸಲಾಯಿತು.
ಈ ಮೂಲಕ ಕೇಂದ್ರ ಸರ್ಕಾರದ ಮೆಗಾ ಯೋಜನೆಗಳಿಗೆ ವಿದ್ಯುತ್ ಪರಿವರ್ತಕಗಳನ್ನು ಉತ್ಪಾದಿಸಿ ಕೊಡುವಲ್ಲಿ ಎನ್ ಜಿಇಎಫ್ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
ಸುಸ್ಥಿರ ಹಾಗೂ ದೀರ್ಘ ಬಾಳಿಕೆಯ ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾದ 250 ಕೆವಿಎ, 400 ಕೆವಿಎ, 630 ಕೆವಿಎ ಹಾಗೂ 800 ಕೆವಿಎ ಸಾಮರ್ಥ್ಯದ ಟ್ರಾನ್ಸಫಾರ್ಮರ್ ಗಳನ್ನು ಇಲ್ಲಿ ತಯಾರಿಸಲಾಗಿದೆ.
ಸದ್ಯ ಗುಜರಾತ್‌ನ ಡೋಹೊಡಾನಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ರೈಲ್ವೆ ಯೋಜನೆಗಾಗಿ 800 ಕೆವಿಎ, 630 ಕೆವಿಎ ಹಾಗೂ 400 ಕೆವಿಎ ಸಾಮರ್ಥ್ಯದ ಐದು ಟ್ರಾನ್ಸಫಾರ್ಮರ್ ಗಳನ್ನು ಕಳುಹಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಮತ್ತೆ ಐದು ಟಿಸಿ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಷ್ಟಿತ ಯೋಜನೆಗಳಿಗೆ ಬೇಕಾದ ಅತ್ಯಂತ ಹೆಚ್ಚು ಸಾಮರ್ಥ್ಯ ಟ್ರಾನ್ಸಫಾರ್ಮರ್ ತಯಾರಿಸಿ ಕೊಡುವ ಸವಾಲಿನ ಕೆಲಸವನ್ನು ಎನ್ ಜಿಇಎಫ್ ಕೈಗೆತ್ತಿಕೊಂಡಿತ್ತು. ಉತ್ಪಾದನೆ ಮಾಡಿರುವ ಟಿಸಿಗಳನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಭಾರತೀಯ ಮಾನಕ ಸಂಸ್ಥೆಯ ವತಿಯಿಂದ (ಬಿಐಎಸ್) ಪ್ರಮಾಣೀಕರಿಸಲಾಗಿದೆ.
ಹುಬ್ಬಳ್ಳಿ- ಧಾರವಾಡದ ರಾಯಾಪುರದಲ್ಲಿ 1986ರಲ್ಲಿ ಸ್ಥಾಪನೆಯಾದ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ (ಎನ್ ಜಿಇಎಫ್) ಇದೇ ಮೊದಲ ಸಲ ಬೃಹತ್ ಟಿಸಿಗಳನ್ನು ಉತ್ಪಾದಿಸಿ ಪರೀಸಿದೆ. ಕಂಪನಿಯ ಟೆಸ್ಟಿಂಗ್ ಬೆಂಚ್ 100ಕೆವಿಎ ದಿಂದ 1000 ಕೆವಿಎ ಸಾಮರ್ಥ್ಯಕ್ಕೆ ಅಪ್ ಗ್ರೇಡ್ ಮಾಡಲಾಗಿದೆ. ಪರೀಕ್ಷಿಸಿದ ಟಿಸಿಗಳನ್ನು ಗುಜರಾತ್ ಗೆ ಕಳುಹಿಸಲಾಗಿದೆ ಎಂದು ಎನ್ ಜಿಇಎಫ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಚ್. ನರೇಗಲ್ ವಿಜಯವಾಣಿಗೆ ತಿಳಿಸಿದರು.