ಜಿಲ್ಲೆ

ಎನ್‌ಎಫ್‌ಎಸ್‌ಯು: ಪ್ರಥಮ ಬ್ಯಾಚ್‌ನಲ್ಲಿ ಸಿಗದ ಪ್ರವೇಶ ಭಾಗ್ಯ

ರವಿ ಎಸ್. ಬಳೂಟಗಿ

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಂಸ್ಥೆ ಆರಂಭವಾಗುತ್ತಿದೆ. ಅದರಂತೆ ಕೆಲ ತಿಂಗಳ ಹಿಂದಷ್ಟೇ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ (ಎನ್‌ಎಫ್‌ಎಸ್‌ಯು)ಸ್ಥಾಪನೆಯಾಗಿ ಪ್ರಸಕ್ತ ವರ್ಷದಿಂದ ಪ್ರವೇಶಾತಿ ಆರಂಭಿಸಿದೆ. ಆದರೆ ಈ ಭಾಗದ ವಿದ್ಯಾರ್ಥಿಗಳಿಗೇ ಅವಕಾಶ ಇಲ್ಲದಂತಾಗಿದೆ.
ಎನ್‌ಎಫ್‌ಎಸ್‌ಯುನಲ್ಲಿ ಬಿಎಸ್ಸಿ, ಎಂಎಸ್ಸಿ ಫಾರೆನ್ಸಿಕ್ ಸೈನ್ಸ್, ಪಿಜಿ ಡಿಪ್ಲೊಮಾ ಕ್ರೈಂ ಸೈನ್ಸ್ ಮ್ಯಾನೇಜ್‌ಮೆಂಟ್, ಬಿ.ಟೆಕ್, ಎಂ.ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಎಂಫಾರ್ಮ್ ಫಾರೆನ್ಸಿಕ್ ಫಾರ್ಮಸಿ, ಎಂಎಸ್ಸಿ ಎನ್ವಿರಾನ್‌ಮೆಂಟ್ ಸೈನ್ಸ್ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಿದೆ.

ಕೋರ್ಸ್ ಸೇರಲು ಪದವಿ ಕಡ್ಡಾಯವಾಗಿದ್ದು, ಮೇ 29ರೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಕರ್ನಾಟಕ ವಿಶ್ವ ವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವ ವಿದ್ಯಾಲಯದ ಬಿಎಸ್ಸಿ ಪದವಿ ಅಂತಿಮ ವರ್ಷದ (6ನೇ ಸೆಮಿಸ್ಟರ್) ತರಗತಿಗಳೇ ಆರಂಭವಾಗಿಲ್ಲ. ಹೀಗಾಗಿ ಎನ್‌ಎಫ್‌ಎಸ್‌ಯು ಮೊದಲ ಬ್ಯಾಚ್ ವಿದ್ಯಾರ್ಥಿ ಆಗುವ ಕನಸು ಹೊತ್ತಿದ್ದ ಹಲವಾರು ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಎಸ್ಸಿ 1,3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ಮುಗಿದು ಮೌಲ್ಯಮಾಪನ ನಡೆಯುತ್ತಿದೆ. 2, 4, 6ನೇ ಸೆಮಿಸ್ಟರ್ ತರಗತಿ ಆರಂಭವಾಗಿ ಪರೀಕ್ಷೆ ಪೂರ್ಣಗೊಳ್ಳುವುದು ಆಗಸ್ಟ್- ಸೆಪ್ಟೆಂಬರ್‌ನಲ್ಲಿ. ಅಷ್ಟೊತ್ತಿಗೆ ಎನ್‌ಎಫ್‌ಎಸ್‌ಯು ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಂಡು ತರಗತಿಗಳೂ ಆರಂಭವಾಗಿರುತ್ತವೆ. ಹೀಗಾಗಿ ಪ್ರಥಮ ಬ್ಯಾಚ್‌ಗೆ ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲದಂತಾಗಿದೆ.

ಕೋವಿಡ್ ಕಾಟದಿಂದ ವ್ಯತ್ಯಾಸವಾಗಿದ್ದ ಎಲ್ಲ ಪದವಿಯ ತರಗತಿ, ಪರೀಕ್ಷೆಗಳು ಇದುವರೆಗೂ ಸರಿ ದಾರಿಗೆ ಬಂದಿಲ್ಲ. ಇದರ ಮಧ್ಯೆ ಕವಿವಿ ತರಾತುರಿಯಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಕವಿವಿಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾದ ಬಳಿಕ ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ರೋಶ. ಇದೀಗ ಎನ್‌ಎಫ್‌ಎಸ್‌ಯುದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕನಸಿಗೆ ವಿವಿಗಳು ತಣ್ಣೀರು ಎರಚಿದಂತಾಗಿದೆ.

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ವಿಶ್ವ ವಿದ್ಯಾಲಯಗಳ ತಪ್ಪಿಗೆ ವಿದ್ಯಾರ್ಥಿಗಳು ಪರಿತಪಿಸುವ ಸ್ಥಿತಿ ಬಂದೊದಗಿದೆ. ಎನ್‌ಎಫ್‌ಎಸ್‌ಯುನಲ್ಲಿ ಪ್ರವೇಶ ಪಡೆಯುವ ಬಯಕೆ ಹೊಂದಿರುವ ವಿದ್ಯಾರ್ಥಿಗಳು ಇನ್ನೂ ಒಂದು ವರ್ಷ ಕಾಯಲೇಬೇಕು. ಇಲ್ಲವೇ ಬೇರೆ ಸ್ನಾತಕೋತ್ತರ ಪದವಿ ಆಯ್ಕೆ ಅನಿವಾರ್ಯ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪಿಸಿದ ಎನ್‌ಎಫ್‌ಎಸ್‌ಯು ಪ್ರಯೋಜನಕ್ಕೆ ಬಾರದಂತಾಯಿತೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡಿದೆ.
ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೊದಲ ಬ್ಯಾಚ್‌ನಲ್ಲೇ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಫಾರೆನ್ಸಿಕ್ ಕಲಿತು ರಾಜ್ಯದ ಪೊಲೀಸ್ ಇಲಾಖೆ ಸೇರಬಹುದಿತ್ತು. ಆದರೆ ಈಗ ನಿರಾಸೆಯಿಂದ ಇರುವಂತಾಗಿದೆ.

ಎನ್‌ಎಫ್‌ಎಸ್‌ಯುನ ಪ್ರಥಮ ಬ್ಯಾಚ್‌ನಲ್ಲೇ ಪ್ರವೇಶ ಪಡೆಯುವ ಆಸೆ ಇತ್ತು. ಆದರೆ ಬಿಎಸ್ಸಿ 6ನೇ ಸೆಮಿಸ್ಟರ್ ತರಗತಿಗಳು ಆರಂಭವಾಗದ ಕಾರಣ ಪ್ರವೇಶ ಅಸಾಧ್ಯ. ಮುಂದಿನ ಶೈಕ್ಷಣಿಕ ವರ್ಷದವರೆಗೆ ಕಾಯುವುದು ಅನಿವಾರ್ಯ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ನಿರ್ಣಯಗಳನ್ನು ವಿವಿಗಳು ಕೈಗೊಂಡರೆ ಅನುಕೂಲ. -ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ ಕರೊನಾದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯತ್ಯಾಸವಾಗಿ ಕೆಲವು ಸಮಸ್ಯೆಗಳು ಎದುರಾಗಿವೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಈ ಸಮಸ್ಯೆಯಿದೆ. ಕವಿವಿಯೇ ಒಂದು ಸೆಮಿಸ್ಟರ್ ಮುಂದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲವೂ ಸರಿಯಾದ ಸಮಯಕ್ಕೆ ಮುಗಿಯುವ ಸಾಧ್ಯತೆಗಳಿವೆ.-ಪ್ರೊ.ಕೆ.ಬಿ. ಗುಡಸಿ, ಕುಲಪತಿ ಕವಿವಿ