ಜಿಲ್ಲೆ

ಹೊಸವರ್ಷಾಚರಣೆಗೆ ಮುಂದಿನವಾರ ಮಾರ್ಗಸೂಚಿ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿಕೆ

ಮಂಜುನಾಥ.ಕೆ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಕರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ವಾರ ಹೊಸವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.


ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಹಿಂದೆ ಯಾವ ರೀತಿಯ ಘಟನೆಗಳು ನಡೆದಿವೆ ಎಂದು ಅವಲೋಕಿಸಿ, ಅವುಗಳನ್ನು ತಡೆಗಟ್ಟುವುದು ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಭದ್ರತೆ ನೀಡಲಾಗುತ್ತದೆ. ಹೊಸ ವರ್ಷ ಸಂಭ್ರಮಾಚರಣೆ ಮಾಡುವವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎರಡು ರೀತಿಯಲ್ಲೂ ಸುರಕ್ಷತಾ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹೊಸ ವರ್ಷಕ್ಕೆ ಎಂದಿನಂತೆ ಎಂ.ಜಿ.ರಸ್ತೆ, ಬ್ರೇಗೇಡ್ ರಸ್ತೆ ಸೇರಿ ಅನೇಕ ಭಾಗಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿ, ಅವರು ನೀಡುವ ಸಲಹೆಗಳ ಪ್ರಕಾರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗುತ್ತದೆ ಎಂದರು.

ತನಿಖೆಗೆ ಸಹಕರಿಸದ ಆರೋಪಿ:
ಇತ್ತೀಚೆಗೆ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ವಿದೇಶಿ ಪೆಡ್ಲರ್ ಲಿಯೋನಾರ್ಡ್‌ನ ವಿಚಾರಣೆ ಮುಂದುವರಿಸಿದ್ದು, ಸದ್ಯ ಆರೋಪಿ ಪೊಲೀಸರ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಆತನ ಮೊಬೈಲ್ ಜಪ್ತಿ ಮಾಡಿದ್ದು, ಆ ಮೂಲಕ ಆತನ ಸಂಪರ್ಕದಲ್ಲಿ ಯಾರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ಮತ್ತೊಂದೆಡೆ ನಗರದಲ್ಲಿ ಅಕ್ರಮ ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು ಗೋಡೌನ್‌ಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಈಗಾಗಲೇ ಕೆಲವೆಡೆ ದಾಳಿ ನಡೆಸಿ ನೂರಾರು ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದೆಯೂ ದಾಳಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.