ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ 5ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ಹಾಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಪತ್ರಿಕಾ ವಿತರಕರು ಆಗಮಿಸಿದ್ದರು. ಸಮ್ಮೇಳ ನದಲ್ಲಿ ಪತ್ರಿಕಾ ವಿತರಕರು ತಮ್ಮ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳಕ್ಕೂ ಮುನ್ನ ಮುಕ್ತ ವಿವಿ ಮುಖ್ಯ ಧ್ವಾರದಿಂದ ಘಟಿಕೋತ್ಸವ ಭವನದವರೆಗೆ ಸಮ್ಮೇಳನಾಧ್ಯಕ್ಷ ಎಂ.ಎನ್. ನಾಗರಾಜ್ ಅವರ ಮೆರವಣಿಗೆ ನಡೆಯಿತು.
ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಕ್ಷೇಮನಿಧಿ ಸ್ಥಾಪಿಸಬೇಕು. ಕ್ಷೇಮನಿಧಿಗೆ ಕನಿಷ್ಠ 2 ಕೋಟಿ ರೂ.ಗಳನ್ನು ನೀಡಬೇಕು. ಪತ್ರಿಕಾ ವಿತರಕರು ಮೃತಪಟ್ಟರೆ ಕ್ಷೇಮನಿಧಿ ಮೂಲಕ ಅವರ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂ. ದೊರೆಯುವಂತೆ ಮಾಡಬೇಕು. 70 ವರ್ಷ ಮೇಲ್ಪಟ್ಟವರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಮಾಧ್ಯಮ ಅಕಾಡೆಮಿಗೆ ಸದಸ್ಯರನ್ನು ನೇಮಕ ಮಾಡುವ ಸಂದರ್ಭ ಪತ್ರಿಕಾ ವಿತರಕರನ್ನು ಪರಿಗಣಿಸ ಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರಂತರವಾಗಿ ಸ್ಪಂದಿಸುತ್ತಾ ಬಂದಿದ್ದು, ಮುಂದೆಯೂ ಸ್ಪಂದಿಸಲಿದೆ. ಪತ್ರಿಕಾ ವಿತರಕರ ಸಮಸ್ಯೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಜತೆಗೆ ಪತ್ರಿಕಾ ಸಂಸ್ಥೆಗಳು, ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯ ಮೂಲಕ ಸಹ ಪತ್ರಿಕಾ ವಿತರಕರಿಗೆ ಅನುಕೂಲ ಕಲ್ಪಿಸುವ ಅವಕಾಶಗಳೂ ಇವೆ. ಈ ದಿಕ್ಕಿನಲ್ಲೂ ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರಜಾಪ್ರಭುತ್ವದ 4ನೇ ಅಂಗವಾದ ಪತ್ರಿಕೆಗಳು ಮನುಷ್ಯರಿಗೆ ಅವಿಭಾಜ್ಯವಾದ ಸಂಗತಿ. ಜಗತ್ತಿನಲ್ಲಿ ಆಗುವ ಎಲ್ಲ ಆಗು ಹೋಗು ಗಳನ್ನು ತಿಳಿಸಿಕೊಡುವ ಕಾರ್ಯವನ್ನು ಮುದ್ರಣ ಮಾಧ್ಯಮ ನೂರಾರು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮ ವ್ಯಾಪಕವಾಗಿ ಜಗತ್ತಿನಲ್ಲಿ ಬೆಳೆದಿದೆ, ಅಲ್ಲಿ ಮಾಹಿತಿ ವ್ಯಾಪಕವಾಗಿದ್ದರೂ ಪತ್ರಿಕೆ ಓದುವ ಹವ್ಯಾಸ ಇರುವವರಿಗೆ ಪತ್ರಿಕೆಯನ್ನು ಓದಿದಾಗ ಮಾತ್ರ ಅವರಿಗೆ ಸಮಾಧಾನ. ಪತ್ರಿಕೆಯಲ್ಲಿ ಬರುವ ಸುದ್ದಿಯೇ ನಿಜವಾದ ಸುದ್ದಿ ಎಂದು ಜನರು ಭಾವಿಸುತ್ತಾರೆ. ಅಂತಹ ಪತ್ರಿಕೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಪತ್ರಿಕೆಗಳು ಮುದ್ರಣವಾಗಿ ಅದು ಓದುಗರ ಕೈ ಸೇರದೆ ಹೋದರೆ ಆ ಪತ್ರಿಕೆಗೆ ಬೆಲೆ ಇರುವುದಿಲ್ಲ. ಜನರ ಕೈಗೆ ಪತ್ರಿಕೆಗಳನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಶ್ರಮ ಅಪಾರ ಎಂದರು.
ಈ ಸಂದರ್ಭ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪತ್ರಿಕಾ ವಿತರಕರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ನೀಡಲಾಯಿತು. ಪತ್ರಿಕಾ ಓದುಗರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಮ್ಮೇಳನಾಧ್ಯಕ್ಷ ಎಂ.ಎನ್. ನಾಗರಾಜ್, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಜೆ.ಎಸ್. ಹೋಮದೇವ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಮಾಜಿ ಜಿಲ್ಲಾಧ್ಯಕ್ಷರಾದ ಅಂಶಿ ಪ್ರಸನ್ನ ಕುಮಾರ್, ಸಿ.ಕೆ. ಮಹೇಂದ್ರ, ರವಿ ಕುಮಾರ್, ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ, ಹಿರಿಯ ಪತ್ರಕರ್ತರಾದ ಸುಬ್ರಹ್ಮಣ್ಯ, ರಾಘವೇಂದ್ರ, ಎಸ್. ನಾಗಣ್ಣ, ಶ್ರೀಧರ್, ಟಿ.ಎಸ್. ಗೋಪಿನಾಥ್, ಪ್ರಕಾಶ್, ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಇತರರು ಇದ್ದರು.