ರಬಕವಿ/ಬನಹಟ್ಟಿ: ಒಬ್ಬ ವರದಿಗಾರ ಸುದ್ದಿ ಬರೆಯಬಹುದು. ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹುಲಗಬಾಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಬೆಳಗ್ಗೆ ಮಳೆಯ ಮಧ್ಯೆ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸವಿರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಾರೆ. ಜಗತ್ತು ಎಷ್ಟೇ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಯಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಪತ್ರಿಕಾ ವಿತರಕರನ್ನು ಕೀಳು ಮಟ್ಟದಲ್ಲಿ ನೋಡುತ್ತಾರೆ. ಅದು ಬದಲಾವಣೆಯಾಗಬೇಕು. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವವಿರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಗೌರವಿಸುವಂತಾಗಬೇಕು ಎಂದರು.
ತಾಲೂಕು ವಿತರಕರ ಸಂಘದ ಅಧ್ಯಕ್ಷ ವಿಶ್ವನಾಥ ಆಳಗಿ ಮಾತನಾಡಿ, ಪತ್ರಿಕಾ ವಿತರಕರ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಮನದಟ್ಟು ಮಾಡಿಕೊಂಡು ಸೂಕ್ತ ಪರಿಹಾರದೊಂದಿಗೆ ವಿತರಕರಿಗೆ ಪ್ರೋತ್ಸಾಹ ಒದಗಿಸಬೇಕಿದೆ. ಅವನತಿಯತ್ತ ಸಾಗುತ್ತಿರುವ ಪತ್ರಿಕೆಗಳನ್ನು ಬೆಳೆಸಿ-ಪೋಷಿಸುವ ಕಾರ್ಯವಾಗಬೇಕು ಎಂದರು.
ಉಲ್ಲಾಸ ಯಂಕಚಿ, ಶಂಭುಲಿಂಗ ಗುಣಕಿ, ಮಲ್ಲಿಕಾರ್ಜುನ ತುಂಗಳ, ಅಕ್ಷಯ ತಿರಕಪಡಿ, ಪ್ರಜ್ವಲ ಹೂಗಾರ, ಶ್ರೀಶೈಲ ಶಿರಹಟ್ಟಿ, ಪ್ರಸನ್ನ ಮಂಡಿ, ಕಾಡು ತಳವಾರ, ವಿನಾಯಕ ಮೈತ್ರಿ, ಅಜಯ ಕಳ್ಳಿಗುದ್ದಿ, ಈರಣ್ಣ ಬಾಣಕಾರ, ಜುನೇದ ಮುಧೋಳ, ಅನು ಬಂಟನೂರ, ಅಕ್ಷಯ ತಿರಕಪಡಿ, ವಿಶಾಲ ಬಾಣಕಾರ, ಮಲ್ಲು ಕೊಣ್ಣೂರ, ಪ್ರದೀಪ ಮಾಳಿ, ಈಶ್ವರ ಕಡ್ಲಿ ಇತರರಿದ್ದರು.