ಉಡುಪಿಯ ಜಿ.ಶಂಕರ್​ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಿದರು. ಪ್ರೊ. ಭಾಸ್ಕರ್​ ಶೆಟ್ಟಿ, ಪ್ರೊ. ನಿಕೇತನಾ, ರಾಜೇಶ್​ ಶೆಟ್ಟಿ ಅಲೆವೂರು,ಕಿರಣ್​ ಮಂಜನಬೈಲು, ಮಂಜುನಾಥ್​ ಬಿ., ನಝೀರ್​ ಪೊಲ್ಯ ಇದ್ದರು. 
ಜಿಲ್ಲೆ

ನಿತ್ಯದ ಜನಜೀವನದೊಂದಿಗೆ ಬೆಸೆದುಕೊಂಡ ಪತ್ರಿಕೆಗಳು

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಭಿಮತ | ಪತ್ರಿಕಾ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಬಹಳಷ್ಟು ಜನರಿಗೆ ಪ್ರತಿದಿನ ಬೆಳಗ್ಗೆ ಪತ್ರಿಕೆ ಓದದ ಹೊರತು ಜೀವನ ಆರಂಭವಾಗುವುದೇ ಇಲ್ಲ. ಅನೇಕ ನಷ್ಟ-ಕಷ್ಟ, ಇಲೆಕ್ಟ್ರಾನಿಕ್​ ಮಾಧ್ಯಮಗಳ ಅಬ್ಬರ, ಅನೇಕ ಸವಾಲುಗಳ ನಡುವೆಯೂ ಸಹ ಜಗತ್ತಿನ ವಿದ್ಯಮಾನ ತಿಳಿಸಿಕೊಡುವ ಪತ್ರಿಕೆಗಳು ಜನಜೀವನದೊಂದಿಗೆ ಬೆಸೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳನ್ನು ಓದಿ

ಟಿವಿ, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಣಾರ್ಧದಲ್ಲೇ ವಿಶ್ವದ ಮಾಹಿತಿ ತಿಳಿದುಕೊಂಡಿದ್ದರೂ ಸಹ ಅದನ್ನು ಪತ್ರಿಕೆಯಲ್ಲಿ ಓದಿದಾಗ ಮಾತ್ರ ಖಚಿತತೆ, ಸತ್ಯ ತಿಳಿದುಬರುತ್ತದೆ. ಪತ್ರಿಕೆಗಳ ಸಂಪಾದಕೀಯ ಅತ್ಯಂತ ವಿಶಿಷ್ಟ ಮತ್ತು ಮಹತ್ವದ್ದಾಗಿರುತ್ತದೆ. ಸ್ವರ್ಧಾತ್ಮಕ ಪರೀಕ್ಷೆ ಬರೆಯುವವರು ಪತ್ರಿಕೆ ಓದಿದರೆ ಹೆಚ್ಚು ಜ್ಞಾನ ಲಭಿಸುತ್ತದೆ. ಇದು ನನ್ನ ಸ್ವಂತ ಅನುಭವ. ಹಾಗಾಗಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಸನ್ಮಾನ, ಉಪನ್ಯಾಸ

ಉಡುಪಿಯ ಹಿರಿಯ ವರದಿಗಾರ ಬಿ.ಬಿ. ಶೆಟ್ಟಿಗಾರ್​ ಅವರನ್ನು ಪತ್ರಿಕಾ ದಿನಾಚರಣೆ ನಿಮಿತ್ತ ಸನ್ಮಾನಿಸಿ, ಗೌರವಿಸಲಾಯಿತು. ಪತ್ರಕರ್ತ ಅಜಿತ್​ ಆರಾಡಿ ಸನ್ಮಾನಿತರ ಪರಿಚಯ ಮಾಡಿದರು. ಉಡುಪಿಯ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಭವ್ಯಾ ನಾಗರಾಜ್​, ಪತ್ರಿಕೆಗಳ ಉಗಮ, ವಿಶೇಷತೆ ಕುರಿತು ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ ಮಂಜನಬೈಲು, ಕಾಲೇಜಿನ ಕಲಾ ನಿಕಾಯದ ಡೀನ್​ ಪ್ರೊ. ನಿಕೇತನಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ವೈಷ್ಣವಿ ಮತ್ತು ಹರ್ಷದಾ ಪ್ರಾರ್ಥಿಸಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ನಝೀರ್​ ಪೊಲ್ಯ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಡಿ.ಎಸ್​. ನಿರೂಪಿಸಿದರು. ಕಾಲೇಜಿನ ಜರ್ನಲಿಸಂ ವಿಭಾಗದ ಮುಖ್ಯಸ್ಥ ಸಚ್ಚೇಂದ್ರ ಸಹಕರಿಸಿದರು.