ಜಿಲ್ಲೆ

ಮಹಾನಗರ ಪಾಲಿಕೆಗೆ ಸಿಹಿ ಸುದ್ದಿ, ಸಂಸದ ಜಿಗಜಿಣಗಿ ಪರಿಶ್ರಮದ ಫಲ, ಎನ್‌ಎಚ್‌ಬಿ ಪಟ್ಟಿಯಲ್ಲಿ ಕೈತಪ್ಪಿದ ಹೆಸರು ಮರು ಸೇರ್ಪಡೆ !

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದರ ಅಪಾರ ಅನುದಾನದಿಂದ ವಂಚಿತಗೊಳ್ಳಲಿದ್ದ ವಿಜಯಪುರ ಮಹಾನಗರ ಪಾಲಿಕೆಗೆ ಸಂಸದ ರಮೇಶ ಜಿಗಜಿಣಗಿ ಪತ್ರವೊಂದು ಆಸರೆಯಾಗಿದೆ.

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಸಾಲ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಮಂತ್ರಾಲಯ ಎನ್‌ಎಚ್‌ಬಿಗೆ ಸಲ್ಲಿಸಿದ್ದ ಪಟ್ಟಿಯಿಂದ ವಿಜಯಪುರ ಮಹಾನಗರ ಪಾಲಿಕೆ ಕೈ ಬಿಟ್ಟು ಹೋಗಿತ್ತು. ಇದನ್ನು ಅರಿತ ಸಂಸದ ರಮೇಶ ಜಿಗಜಿಣಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಪರಿಣಾಮ ಕೇಂದ್ರ ವಸತಿ ಮಂತ್ರಾಲಯ ಎನ್‌ಎಚ್‌ಬಿಗೆ ನೀಡಿದ ಪಟ್ಟಿಯಲ್ಲಿ ವಿಜಯಪುರ ಹೆಸರನ್ನು ಪರಿಗಣಿಸುವಂತೆ ಕಾರ್ಯಾದೇಶ ನೀಡಿದೆ.

ಈ ಕುರಿತು ಸಂತಸ ಹಂಚಿಕೊಂಡ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯ ಸರ್ಕಾರ 2022-23 ನೇ ಸಾಲಿನಲ್ಲಿ ಮಹಾನಗರ ಪಾಲಿಕೆಗಳಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅನುಷ್ಠಾನಗೊಳಿಸಲು ವಿಶೇಷಾನುದಾನ ಬಿಡುಗಡೆ ಮಾಡಿತ್ತು. ಈ ಯೋಜನೆಯಡಿಯಲ್ಲಿ ಅನುದಾನ ಪಡೆಯಲು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಡಿಯಲ್ಲಿ ರಾಜ್ಯ ಸರ್ಕಾರ ಸಾಲದ ಪಡೆಯುತ್ತಿದ್ದು, ಈ ಯೋಜನೆಗೆ ಅರ್ಹತೆ ಪಡೆದುಕೊಂಡಿರುವ ನಗರಗಳ ಪಟ್ಟಿಯನ್ನು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಮಂತ್ರಾಲಯ ಎನ್‌ಎಚ್‌ಬಿಗೆ ಸಲ್ಲಿಸಿತ್ತು. ಈ ಪಟ್ಟಿಯಲ್ಲಿರುವ ಮಹಾನಗರಗಳಿಗೆ ಮಾತ್ರ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ ಅಡಿಯಲ್ಲಿ ಸಾಲ ದೊರಕುತ್ತಿತ್ತು. ಆದರೆ, ಆ ಪಟ್ಟಿಯಲ್ಲಿ ವಿಜಯಪುರ ಹೆಸರು ಇಲ್ಲದ್ದರಿಂದ ದೊಡ್ಡ ಅನುದಾನ ಕೈ ತಪ್ಪಿ ಹೋಗುವಂತಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪತ್ರ ವ್ಯವಹಾರ ನಡೆಸಿ ಮನವರಿಕೆ ಮಾಡಿದ ಪರಿಣಾಮ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಮಂತ್ರಾಲಯ ಎನ್‌ಎಚ್‌ಬಿಗೆ ಸಲ್ಲಿಸಿದ ಪಟ್ಟಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸಹ ಸೇರ್ಪಡೆ ಮಾಡುವಂತೆ ಇನ್ನೊಂದು ಆದೇಶ ಹೊರಡಿಸಿದೆ ಎಂದರು.