ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ದಾಜಿಬಾನಪೇಟ ಗೌಳಿಗಲ್ಲಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ನೂತನ ಸಭಾಭವನವನ್ನು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಭಾನುವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗೌಳಿಗಲ್ಲಿಯಲ್ಲಿ ಕಾಂಕ್ರಿಟ್ ರಸ್ತೆ, ಒಳಚರಂಡಿ, ತೆರೆದ ಚರಂಡಿ, ಕುಡಿಯುವ ನೀರು ಸೇರಿ ಅನೇಕ ಸೌಕರ್ಯ ಒದಗಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ತಾವು ಕೇಳದೇ ಇದ್ದರೂ, ನನ್ನ ಕ್ಷೇತ್ರದ ಪ್ರತಿ ಪ್ರಜೆಯ ಶ್ರೇಯೋಭಿವೃದ್ಧಿ ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದರು.
ಗೌಳಿಗಲ್ಲಿ ಪ್ರದೇಶ ಸರ್ಕಾರದ ಭೂಮಿಯಾಗಿದ್ದರೇ ಕೂಡಲೇ ಹಕ್ಕುಪತ್ರ ವಿತರಣೆ ಮಾಡಬಹುದಿತ್ತು. ಆದರೆ, ಇದು ಖಾಸಗಿ ಭೂಮಿಯಾಗಿದೆ. ಆದರೂ ಈ ಬಗ್ಗೆ ರ್ಚಚಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪಾಲಿಕೆ ಸದಸ್ಯ ಆರೀಫ್ ದೊಡ್ಡಮನಿ, ಗೌಳಿ ಸಮಾಜದ ಮುಖಂಡರಾದ ರಾಜು ಧರ್ಮದಾಸ್, ಲಕ್ಷ್ಮಣ ಗಟ್ಟಿ, ಪಾರೋಜಿ ಚೌಧರಿ, ಮಾರುತಿ ಗಟ್ಟಿ, ಮನೇಶ್ವರ ಚೌಧರಿ, ಸಂತೋಷ ಗಣೆಪ್ಪ, ರಾಘವೇಂದ್ರ ದೋಂಗಡಿ ಸೇರಿದಂತೆ ಅನೇಕರಿದ್ದರು.