ಕೈಲಾಂಚ : ಹೊಸ ವರ್ಷವನ್ನು ಜನತೆ ಸಂಭ್ರಮ ಸಡಗರದಿಂದ ಆಚರಿಸಿ ಭವ್ಯ ಸ್ವಾಗತ ಕೋರಿದರು.
ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಯುವತಿಯರು, ಮಹಿಳೆಯರು ಮನೆಗಳ ಮುಂದೆ, ಬೀದಿಗಳಲ್ಲಿ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಹಾಕಿ, ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, 2025ರ ಹೊಸ ವರ್ಷದ ಶುಭಾಷಯಗಳು ಎಂದು ಕನ್ನಡ ಮತ್ತು ಇಂಗ್ಲಿಷ್ ಪದಗಳಲ್ಲಿ ಬರೆದು ಅಕ್ಷರಗಳಿಗೆ ಬಣ್ಣ ಹಚ್ಚಿ ಹೊಸ ವರ್ಷವನ್ನು ರಂಗೋಲಿ ಚಿತ್ತಾರದ ಮೂಲಕ ಸ್ವಾಗತಿಸಿದರು.
ರಾಮನಗರದ ಚಾಮುಂಡೇಶ್ವರಿ, ಕಾಳಿಕಾಂಭ, ಆಂಜನೇಯ, ಅರ್ಚಕರಹಳ್ಳಿ ಮಹದೇಶ್ವರ, ಲಕ್ಕೋಜನಹಳ್ಳಿ ವೀರಭದ್ರಸ್ವಾಮಿ, ಗೌಡಯ್ಯನದೊಡ್ಡಿ ಶನೈಶ್ಚರ, ಆಂಜನೇಯ, ಚಿಕ್ಕೇನಹಳ್ಳಿ ಉದ್ಬವಮೂರ್ತಿ ನಾಗಪ್ಪ ದೇವಾಲಯಗಳಲ್ಲಿ ಹೆಚ್ಚಿನ ಭಕ್ತರು ಕಂಡುಬಂದರು. ವಿಶೇಷ ಪೂಜೆ ಅಲಂಕಾರ ಸೇವೆಗಳು ದೇವಾಲಯದಲ್ಲಿ ನಡೆದವು.
ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬುಧವಾರ ಜನಸಾಗರವೇ ಹರಿದುಬಂತು. ದಕ್ಷಿಣಕಾಶಿ ಎಂದೇ ಪ್ರಚಲಿತವಾಗಿ ಶೃದ್ಧಾ ಭಕ್ತಿಯ ಪವಿತ್ರ ಧಾರ್ಮಿಕ ಭಕ್ತಿ ಕೇಂದ್ರವಾಗಿ ಜಿಲ್ಲೆಯ ಪ್ರವಾಸಿ ತಾಣವಾಗಿ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ಇದಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಮತ್ತು ಜಿಲ್ಲೆ ಹೊರ ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಬೆಟ್ಟದ ಕೆಳಭಾಗದಿಂದ ಮಧ್ಯದ ಭೀಮೇಶ್ವರಿ ದೇವಾಲಯದವರೆಗೆ ವಾಹನಗಳ ಸಾಲು ಕಂಡುಬಂತು. ಪಾರ್ಕಿಂಗ್ ಜಾಗದಲ್ಲಿ ಜಾಗ ಸಿಗದೆ ಕಾರುಗಳು ಇಡೀ ರಸ್ತೆಯಲ್ಲಿ ಕೆಳಭಾಗದವರೆಗೂ ಸಾಲುಗಟ್ಟಿ ನಿಂತಿದ್ದವು.
ಹೊಸವರ್ಷದ ಆಚರಣೆ ನಿಮಿತ್ತ ಬೆಟ್ಟದ ಮೇಲಿರುವ ಉದ್ಬವ ಮೂರ್ತಿ ರೇವಣಸಿದ್ದೇಶ್ವರ, ಬೆಟ್ಟದ ಮಧ್ಯಭಾಗದ ಭೀಮೇಶ್ವರ ಸನ್ನಿಧಿಯ ಮರುಳ ಸಿದ್ದೇಶ್ವರ, ವೀರಭದ್ರಸ್ವಾಮಿ, ಬೆಟ್ಟದ ಕೆಳಭಾಗ ರೇಣುಕಾಂಭ, ಬಸವೇಶ್ವರ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ರುದ್ರಾಭಿಷೇಕ, ಪೂಜೆ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಿತು.
ಅನ್ನಪ್ರಸಾದ : ಬೆಟ್ಟಕ್ಕೆ ಬಂದ ಭಕ್ತರಿಗೆ ರೇವಣಸಿದ್ದೇಶ್ವರ ಅಭಿವೃದ್ಧಿ ಸೇವಾ ಟ್ರಸ್ಟ್ ಮತ್ತು ದಾಸೋಹ ಮಠದ ಬಸವಲಿಂಗರಾಜ ಸ್ವಾಮೀಜಿ, ಕಿರಿಯಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರಿಗೆ ಅನ್ನದಾಸೋಹ ಸೇವೆ ನಡೆಯಿತು.
ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಅಕ್ಕ-ಪಕ್ಕದ ಪ್ರದೇಶಗಳಲ್ಲಿನ ರೆಸಾರ್ಟ್‌ಗಳಲ್ಲಿ ಹೆಚ್ಚಿನ ಜನರು ಕಂಡುಬಂದು ಹೊಸ ವರ್ಷ ಆಚರಣೆಗೆ ರೆಸಾರ್ಟ್‌ಗಳು ತುಂಬಿ ತುಳುಕಿದವು.