ಜಿಲ್ಲೆ

ಒಂದೇ ಹೆಸರಿನಿಂದ ಪೀಕಲಾಟ

ಮಡಿಕೇರಿ : ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ದಂಪತಿಗಳು ಹೆಸರು ಒಂದೇ ರೀತಿಯಲ್ಲಿರುವುದು ಪೀಕಲಾಟಕ್ಕೆ ಕಾರಣವಾಗಿದೆ. ನವಜಾತ ಶಿಶು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಡಾ.ಬಿ.ಸಿ.ನವೀನ್‌ಕುಮಾರ್- ಡಾ.ರಾಜೇಶ್ವರಿ ಅನಗತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಆಶ್ವಿನಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಹೆರಿಗೆ ಮಾಡಿಸಿ, ಮಗು ಮಾರಾಟ ಮಾಡಿದ ಆರೋಪಕ್ಕೆ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಎನ್.ಎಸ್. ನವೀನ್ ಹಾಗೂ ಅವರ ಪತ್ನಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ರಾಜೇಶ್ವರಿ ತುತ್ತಾಗಿದ್ದಾರೆ. ಇವರಿಬ್ಬರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ದಿನಪತ್ರಿಕೆ ಮಾಲೀಕರೂ ಆಗಿರುವ ಶ್ರೀ ರಾಜರಾಜೇಶ್ವರಿ ಆಸ್ಪತ್ರೆ ಮಾಲೀಕ ಡಾ.ಬಿ.ಸಿ.ನವೀನ್‌ಕುಮಾರ್ ಹಾಗೂ ಅವರ ಪತ್ನಿ ಸ್ತ್ರಿರೋಗ ತಜ್ಞೆ ವೈದ್ಯೆ ಡಾ.ರಾಜೇಶ್ವರಿ ಆರೋಪಿಗಳು ಎಂದು ಸಾಕಷ್ಟು ಜನ ತಪ್ಪಾಗಿ ಭಾವಿಸಿಕೊಂಡಿದ್ದಾರೆ. ಈ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆದಿರುವುದು ಡಾ.ಬಿ.ಸಿ. ನವೀನ್‌ಕುಮಾರ್-ಡಾ.ರಾಜೇಶ್ವರಿಗೆ ನೋವುಂಟು ಮಾಡಿದೆ.
ನಾನು ಮತ್ತು ಪತ್ನಿ 2002 ರಿಂದ 2007ರವರೆಗೆ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯನಿರ್ವಹಿಸಿದ್ದೇವೆ. ತದನಂತರ ನಮ್ಮದೇ ಆದ ಸಂಸ್ಥೆ ಹೊಂದಿದ್ದೇವೆ. ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗಾಗಲಿ, ನಮ್ಮ ಸಂಸ್ಥೆಗಾಗಲಿ ಯಾವುದೇ ಸಂಬಂಧವಿರುವುದಿಲ್ಲ ಎಂದು ಡಾ.ಬಿ.ಸಿ. ನವೀನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.