ಜಿಲ್ಲೆ

ಪೊದೆಯಲ್ಲಿ ಪತ್ತೆಯಾದ ನವಜಾತ ಶಿಶು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು

ಕುಂದಾಪುರ: ಅಮಾಸೆಬೈಲು ಮಚ್ಚಟ್ಟು ಸೇತುವೆ ಬಳಿ ಕಾಡಿನ ಪೊದೆಯಲ್ಲಿ ಪತ್ತೆಯಾದ ಹೆಣ್ಣು ಮಗುವನ್ನು ಬುಧವಾರ ಮಡಿವಾಳಕಟ್ಟು ನಿವಾಸಿ ಗೀತಾ ಎಂಬುವರು ರಕ್ಷಣೆ ಮಾಡಿ ಅಮಾಸೆಬೈಲು ಠಾಣಾಧಿಕಾರಿ ಸುಬ್ಬಣ್ಣ ಅವರಿಗೆ ಒಪ್ಪಿಸಿದ್ದು, ಮಗು ಎಸೆದು ಹೋಗಿರುವವರ ಪತ್ತೆ ಕಾರ್ಯ ಆರಂಭಿಸಲಾಗಿದೆ. ಶೀಘ್ರದಲ್ಲೇ ಮಗುವಿನ ತಾಯಿಯನ್ನು ಪತ್ತೆ ಮಾಡುವ ವಿಶ್ವಾಸ ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರದ ಎಸ್‌ಐ: ಮಗುವಿಗೆ ಜ್ವರವಿದ್ದು, ಹಸಿವಿನಿಂದ ಬಳಲುತ್ತಿರುವುದನ್ನು ಠಾಣಾಧಿಕಾರಿ ಸುಬ್ಬಣ್ಣ, ಸ್ಥಳೀಯ ಮಹಿಳೆಯರ ಸಹಕಾರದಲ್ಲಿ ಮಗುವಿಗೆ ಶೈತ್ಯೋಪಚಾರ ಹಾಗೂ ಹಾಲುಣಿಸಿ, ಸ್ಥಳೀಯ ವೈದ್ಯರ ಮೂಲಕ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿಗೆ ಜ್ವರವಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ ಮಕ್ಕಳ ರಕ್ಷಣಾ ಘಟಕ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಚೇತರಿಸಿಕೊಳ್ಳುವ ತನಕ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳುತ್ತೇವೆ. ಚೇತರಿಕೆ ಕಂಡ ಬಂದ ನಂತರ ಕಾನೂನು ನಿಯಮದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಸರ್ಜನ್ ಡಾ.ರಾಬರ್ಟ್ ರೆಬೆಲೊ ವಿಜಯವಾಣಿಗೆ ತಿಳಿಸಿದ್ದಾರೆ