ಮೈಸೂರು: ಸುಂದರ ಪ್ರಕೃತಿಯ ಮಡಿಲಿನಲ್ಲಿ ಏರ್ಪಡಿಸಿರುವ ಜೀವನೋತ್ಸಾಹ ಶಿಬಿರ ಜೀವನಕ್ಕೆ ಹೊಸ ಹುರುಪು ನೀಡುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನ ಉತ್ಸಾಹವನ್ನು ಹೆಚ್ಚಿಸುವ ಶಿಬಿರ ಇದಾಗಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಛಲದಿಂದ ಎದುರಿಸಬೇಕು. ಎಲ್ಲ ಕಷ್ಟ-ನಷ್ಟ ಮತ್ತು ಸಮಸ್ಯೆಗಳಿಗೆ ಗೂಗಲ್‌ನಲ್ಲಿ ಉತ್ತರ ಲಭಿಸುವುದಿಲ್ಲ. ಹಳ್ಳಿಯ ಆಹಾರ ಪದ್ಧತಿಯು ಆರೋಗ್ಯಕರವಾಗಿರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಹಿರಿಯರನ್ನು. ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಡಾ.ಬಿ.ಟಿ. ಕವಿತಾ ಮಾತನಾಡಿ, ಭಗವಂತನು ನೀಡಿದ ಈ ಜೀವನ ಸುಂದರವಾಗಿದೆ. ಇಂತಹ ಜೀವನವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಲು ಇಂತಹ ಶಿಬಿರಗಳ ಅವಶ್ಯಕತೆ ಇದೆ. ಜೀವನವನ್ನು ನಮಗೋಸ್ಕರವೇ ಪ್ರೀತಿಸಬೇಕು. ನಿಸ್ವಾರ್ಥ ಜೀವನ ಸಾಗಿಸಬೇಕು. ಸಮಾಜ ಗುರುತಿಸುವಂತೆ ಮತ್ತು ಗೌರವಿಸುವಂತೆ ಬದುಕಬೇಕು. ಜೀವನದಲ್ಲಿ ಸರಳತೆ ಅತಿಮುಖ್ಯ. ನಿಸರ್ಗದ ಸಂಘದಿಂದ ಮನಸ್ಸು ಶಾಂತವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ್ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ನಾನು ಉನ್ನತ ಮಟ್ಟಕ್ಕೆ ಬೆಳೆದು, ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಸುತ್ತೂರು ಶ್ರೀಮಠ ನಡೆಸುವ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿರುತ್ತವೆ. ಇಂತಹ ಸುಂದರ ಪರಿಸರದಲ್ಲಿ ಜೀವನಕ್ಕೆ ಬೇಕಾದ ಉತ್ತಮ ಅಂಶಗಳ ಕುರಿತು ಉಪನ್ಯಾಸಗಳನ್ನು ಏರ್ಪಡಿಸಿದ್ದಾರೆ. ಎಲ್ಲರೂ ಈ ಶಿಬಿರದಿಂದ ಉಪಯೋಗ ಪಡೆದು ಉತ್ಸಾಹದಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಭಾರತ ಸುಂದರವಾದ ದೇಶವಾಗಿದ್ದು, ಇಲ್ಲಿ ಬದುಕಬೇಕಾದರೆ ಹೊಂದಾಣಿಕೆ ಅನಿವಾರ್ಯ. ಕೌಟುಂಬಿಕ ಹೊಂದಾಣಿಕೆ ಮತ್ತು ಸಾರ್ವಜನಿಕ ಹೊಂದಾಣಿಕೆ ಬಹಳ ಮುಖ್ಯ. ಯಾರು ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅವರು ಸಂತೋಷವಾಗಿರುತ್ತಾರೆ. ಇಂದು ದೇಹಕ್ಕೆ ಬರುವ ರೋಗಗಳೊಂದಿಗೂ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಜೀವನ ಉತ್ಸಾಹದಿಂದ ಕೂಡಿರಬೇಕಾದರೆ ಹೊಂದಾಣಿಕೆ ಅತಿಮುಖ್ಯ ಎಂದು ತಿಳಿಸಿದರು.
ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್ ಮಾತನಾಡಿದರು. ಬಾಲಭವನದ ಅಧ್ಯಕ್ಷ ಬಿ.ಆರ್. ನಾಯ್ಡು, ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗಿರೀಶ್ ಕೋಟೆ ಇತರರು ಇದ್ದರು.