ಜಿಲ್ಲೆ

ಪ್ರಕೃತಿ ಸ್ನೇಹಿಯಾಗಿ ಬದುಕು ನಡೆಸಲಿ: ಡಿಎಚ್‌ಒ ಡಾ.ಕೆ.ಮೋಹನ್ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮನುಷ್ಯ ಪ್ರಕೃತಿ ಸ್ನೇಹಿಯಾಗಿ ಬದುಕು ನಡೆಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸಲಹೆ ನೀಡಿದರು.

ಹೊಸ ವರ್ಷದ ಅಂಗವಾಗಿ ಅನನ್ಯ ಹಾರ್ಟ್ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಕಳೆದ ವರ್ಷ ಎಷ್ಟೋ ಪ್ರಕೃತಿ ವಿಕೋಪವನ್ನು ನಾವು ನೋಡಿದ್ದೇವೆ. ಈ ರೀತಿಯ ತೊಂದರೆಯಿಂದ ಮನುಷ್ಯ ಬಿಡುಗಡೆ ಹೊಂದಬೇಕೆಂದರೆ ಪರಿಸರ ಸ್ನೇಹಿಯಾಗಿ ಬದುಕಬೇಕು. ಇದೇ ಉದ್ದೇಶದೊಂದಿಗೆ ಗಿಡ ನೆಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್, ಮಳವಳ್ಳಿ ಟಿಎಚ್‌ಒ ಡಾ.ವೀರಭದ್ರಪ್ಪ, ಜಿಲ್ಲಾ ಸಲಹೆಗಾರ ತಿಮ್ಮರಾಜು, ಅನನ್ಯ ಹಾರ್ಟ್ ಸಂಸ್ಥೆಯ ಅಧ್ಯಕ್ಷರೂ ಆದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ಕೇಕ್ ಬಿಡಿ ಗಿಡ ನೆಡಿ: ಮುಕ್ತ ವಿಶ್ವವಿದ್ಯಾಲಯ ಮಂಡ್ಯ ಪ್ರಾದೇಶಿಕ ಕಚೇರಿ ಆವರಣದಲ್ಲಿ ಅನನ್ಯ ಹಾರ್ಟ್ ಸಂಸ್ಥೆ ಮತ್ತು ಕೆಎಸ್‌ಒಯು ಸಹಯೋಗದಲ್ಲಿ ‘ಕೇಕ್ ಬಿಡಿ ಗಿಡ ನೆಡಿ’ ಎಂಬ ಘೋಷಣೆಯೊಂದಿಗೆ ಗಿಡ ನೆಟ್ಟು ಹೊಸ ವರ್ಷಾಚರಣೆ ಮಾಡಲಾಯಿತು.

ಪ್ರಾದೇಶಿಕ ನಿರ್ದೇಶಕಿ ಮಿಲನಾ ಮಾತನಾಡಿ, ಇಂದಿನ ಯುವಜನತೆ ಮೋಜು ಮದ್ಯ ಮಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೊಸ ವರ್ಷದ ಸವಿ ನೆನಪು ಉಳಿಯುವ ಬದಲು ಕಹಿಘಟನೆಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಹೊಸ ವರ್ಷವನ್ನು ಆರೋಗ್ಯಯುತವಾಗಿ ಆಚರಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಪ್ರಾದೇಶಿಕ ಕಚೇರಿಯ ವೆಂಕಟರಾಮು, ಹನುಮೇಗೌಡ ಇತರರಿದ್ದರು.