ಮಡಿಕೇರಿ: ಹೊಸ ಹೊಸ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಬರಬೇಕು ಎಂದು ಬರಹಗಾರರು ಹಾಗೂ ಸಮಾಜ ಸೇವಕಿ ತೆನ್ನಿರ ಟೀನಾ ಚಂಗಪ್ಪ ಹೇಳಿದರು.
ಕೊಡವ ಮಕ್ಕಡ ಕೂಟದ ೯೫ನೇ ಪುಸ್ತಕ, ಬರಹಗಾರ್ತಿ ಸುಮನ್ ಸೀತಮ್ಮ ಅವರು ರಚಿಸಿರುವ ಭಾವಸ್ತುತಿಯನ್ನು ಪುಸ್ತಕವನ್ನು ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸಾಹಿತ್ಯಾಭಿಮಾನಿಗಳು ಆರ್ಥಿಕ ಸಹಕಾರ ಮತ್ತು ನೆರವು ನೀಡುತ್ತಾರೆ. ಆರ್ಥಿಕತೆಯ ಕಾರಣದಿಂದ ಬರಹಗಾರರು ಹಿಂದೆ ಸರಿಯಬಾರದು. ಹೊಸ ಹೊಸ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಬರಬೇಕು ಎಂದರು.
ಸಾಹಿತ್ಯ ಕ್ಷೇತ್ರ ಮತ್ತು ಬರಹಗಾರರಿಗೆ ಕೊಡವ ಮಕ್ಕಡ ಕೂಟ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ. ಕೂಟದ ೧೦೦ನೇ ಪುಸ್ತಕ ಸಧ್ಯದಲ್ಲಿಯೇ ಬಿಡುಗಡೆಯಾಗುತ್ತಿದ್ದು, ಮತ್ತಷ್ಟು ಪುಸ್ತಕಗಳು ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಪರಿಶ್ರಮದಿಂದ ಸಾಹಿತ್ಯ ಲೋಕಕ್ಕೆ ಸಿಗಲಿ ಎಂದು ಹಾರೈಸಿದರು.
ಭಾವಸ್ತುತಿ ಪುಸ್ತಕದ ಬರಹಗಾರರಾದ ಬೊಟ್ಟಂಗಡ ಸುಮನ್ ಸೀತಮ್ಮ ಮಾತನಾಡಿ, ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪತ್ರಿಕೆ ಮತ್ತು ಪುಸ್ತಕ ಕಡೆಗಣಿಸಲ್ಪಡುತ್ತಿದೆ. ಮನೆ ಹಾಗೂ ಶಾಲೆಯಿಂದಲೇ ಓದುವ ಹವ್ಯಾಸ ಸೃಷ್ಟಿಯಾಗಬೇಕು ಎಂದರು.
ಭಾವನೆಗಳ ಸಾರಕ್ಕೆ ನನ್ನ ಎರಡನೇ ಪುಸ್ತಕ ಭಾವಸ್ತುತಿಯಲ್ಲಿ ಅಕ್ಷರಗಳ ರೂಪ ನೀಡಿದ್ದೇನೆ. ಬರವಣಿಗೆಗೆ ನನ್ನ ಮನೆಯಿಂದಲೇ ಪ್ರೇರಣೆ ದೊರೆತ್ತಿದೆ. ಅಕ್ಷರಕ್ಕೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಗೌರವ ನೀಡಿದ್ದಾರೆ. ನೋವು, ನಲಿವು, ಪ್ರೀತಿ, ಜೀವನ ಶೈಲಿ, ಹಬ್ಬ, ಗುರಿ ಮೊದಲಾದ ವಿಚಾರಗಳು ಪುಸ್ತಕದಲ್ಲಿದೆ ಎಂದು ತಿಳಿಸಿದರು.
ಸಮಾಜ ಸೇವಕರಾದ ಬಾಳೆಯಡ ಮೀನಾ ಕುಮಾರಿ ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಯಾವುದೇ ಸನ್ನಿವೇಶ ಎದುರಾದರೂ ಪುಸ್ತಕಗಳನ್ನು ಓದಿ ನೆಮ್ಮದಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ರಚಿಸಿರುವ ಕಾವೇರಿ ಸುಪ್ರಭಾತ ಪುಸ್ತಕವನ್ನು ಅ.೧೬ ರಂದು ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಗುವುದು. ಕಾವೇರಿ ತುಲಾ ಸಂಕ್ರಮಣದ ದಿನವಾದ ಅ.೧೭ ರಂದು ತಲಕಾವೇರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದರು.
ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ಮಕ್ಕಡ ಕೂಟ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ಉಚಿತವಾಗಿ ನೀಡುತ್ತಿದೆಯೇ ಹೊರತು ಮಾರಾಟ ಮಾಡುತ್ತಿಲ್ಲ. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಓದುವ ಹವ್ಯಾಸ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಉತ್ಸಾಹಿ ಬರಹಗಾರರು ಮುಂದೆ ಬಂದರೆ ಪುಸ್ತಕ ಪ್ರಕಟಣೆಗೆ ಸಹಕಾರ ನೀಡಲಾಗುವುದು. ಅ.೨೬ ರಂದು ೯೯ನೇ ಪುಸ್ತಕ ಮತ್ತು ನವೆಂಬರ್‌ನಲ್ಲಿ ೧೦೦ನೇ ಪುಸ್ತಕವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ಬೊಳ್ಳಜಿರ ಅಯ್ಯಪ್ಪ ಹೇಳಿದರು.
ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಖಜಾಂಚಿ ಉಳ್ಳಿಯಡ ಗಂಗಮ್ಮ ನಂಜಪ್ಪ ಹಾಗೂ ಬರಹಗಾರ ಬೊಟ್ಟಂಗಡ ತಿಲಕ್ ಉಪಸ್ಥಿತರಿದ್ದರು.