ಜಿಲ್ಲೆ

ಸಿಲಿಕಾನ್ ಸಿಟಿಯಲ್ಲಿ ಹೊಸ ಕಣ್ಗಾವಲು ತಂಡ

chandru

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೊನಾ ತಡೆಯುವ ನಿಟ್ಟಿನಲ್ಲಿ ಕಣ್ಗಾವಲು ನಡೆಸಲು ಮತ್ತು ಸಾರ್ವಜನಿಕ ಆರೋಗ್ಯ ಹೆಚ್ಚಿಸಲು ಹೊಸ ಕಾರ್ಯತಂಡಗಳನ್ನು ಸರ್ಕಾರ ರಚಿಸಿದೆ. ಸಾಮಾಜಿಕ ಅಂತರ ಕಾಪಾಡುವುದನ್ನು ಮೇಲ್ವಿಚಾರಣೆ ಮಾಡುವುದು, ಸರ್ವೆಕ್ಷಣೆ ನಡೆಸುವುದು ಹಾಗೂ ರೋಗಿಗಳ ವರ್ಗಾವಣೆ ಹೊಣೆಗಾರಿಕೆಯನ್ನು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 24 (ಇ), (ಎಫ್) ಮತ್ತು ಎಲ್ ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕಾರ್ಯತಂಡಗಳನ್ನು ರಚಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಆದೇಶದಲ್ಲಿ ಹೇಳಿದ್ದಾರೆ.

ರೋಗಿಗಳ ವರ್ಗಾವಣೆ: ಕೋವಿಡ್ ರೋಗಿಗಳ ವರ್ಗಾವಣೆ ಕಣ್ಗಾವಲಿಗೆ ತಂಡ ರಚಿಸಿದ್ದು, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್​ಗೆ ಜವಾಬ್ದಾರಿ ನೀಡ ಲಾಗಿದೆ. ಅವರಿಗೆ ಸಹಕಾರ ನೀಡಲು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ಡಿಸಿಪಿ ಅನುಚೇತ್, ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ. ಬಣಕಲ್ ಅವರನ್ನು ನಿಯೋಜಿಸಲಾಗಿದೆ. ಈ ತಂಡ ಸೋಂಕಿತರನ್ನು ಅವರ ಮನೆ ಗಳಿಂದ ಅಥವಾ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಂದ ಕ್ಲಿನಿಕಲ್ ಅಸೆಸ್​ವೆುಂಟ್ ಕೇಂದ್ರಗಳಿಗೆ 6 ಗಂಟೆಯೊಳಗೆ ವರ್ಗಾಯಿಸಲು, ಬಳಿಕ ಕೋವಿಡ್ ಆಸ್ಪತ್ರೆಗೆ ಕೇಂದ್ರ ಅಥವಾ ಆರೈಕೆ ಕೇಂದ್ರಕ್ಕೆ ವರ್ಗಾವಣೆ ಖಚಿತಪಡಿಸಿಕೊಳ್ಳಲು ಹಾಗೂ ಸಂಪರ್ಕ ಪತ್ತೆ ತಂಡ- ಪೊಲೀಸ್ ನೋಡಲ್ ಅಧಿಕಾರಿಗಳ ಪ್ರೋಟೋಕಾಲ್, ಕಾರ್ಯವಿಧಾನ ಪರಿಶೀಲಿಸಲಿದೆ.

ವ್ಯಕ್ತಿಗತ ಅಂತರಕ್ಕೆ ತಂಡ: ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಮಿನರಲ್ ನಿಗಮ ಎಂಡಿ ನವೀನ್ ರಾಜ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪಾಲಿಕೆ ವಿಶೇಷ ಆಯುಕ್ತ ಅನ್ಬುಕುಮಾರ್, ಕೃಷಿ ಮಾರುಕಟ್ಟೆ ನಿರ್ದೇಶಕ ಕರೀಗೌಡ, ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ಸದಸ್ಯ ರಾಗಿದ್ದಾರೆ. ಈ ತಂಡ ವ್ಯಕ್ತಿಗತ ಅಂತರ ಉಲ್ಲಂಘನೆಗೆ ದಂಡ ವಿಧಿಸಿ, ನಗರದಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲಿದೆ.

ವಲಯ ಸರ್ವೆಕ್ಷಣೆ: ಕೆಪಿಎಸ್ಸಿ ಕಾರ್ಯದರ್ಶಿ ಸತ್ಯವತಿ ನೇತೃತ್ವದ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್, ಉಪ ಪೊಲೀಸ್ ಆಯುಕ್ತರಾದ ದಿವ್ಯಾ ಇದ್ದಾರೆ. ಕಂಟೇನ್ಮೆಂಟ್ ವಲಯದ ಪರಿಧಿ ನಿಯಂತ್ರಣ, ಶಂಕಿತ ಪ್ರಕರಣಗಳ ಪತ್ತೆಗಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ಸುತ್ತಮುತ್ತಲಿನ ಪ್ರದೇಶದ ತೀವ್ರ ಸರ್ವೆಕ್ಷಣೆ ನಡೆಸುವ ಹೊಣೆಗಾರಿಕೆ ವಹಿಸಲಾಗಿದೆ.