ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿಯ ನೂತನ ಶಿಲಾದೇಗುಲ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಫೆ. 21ರಿಂದ 23 ರವರೆಗೆ ನಡೆಯಲಿದೆ. ನಿತ್ಯ ಸಂಜೆ 6 ರಿಂದ 7 ರವರೆಗೆ ಶಿರುಂಜ ಗ್ರಾಮದ ಧ್ಯಾನಯೋಗಾಶ್ರಮದ ಶ್ರೀ ಬಸವ ಸಮರ್ಥ ಮಹಾಸ್ವಾಮಿಗಳಿಂದ ದೇವಸ್ಥಾನದ ಆವರಣದಲ್ಲಿ ಪ್ರವಚನ ಜರುಗಲಿದೆ ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಈಶ್ವರಗೌಡ ಬ. ಹಿರೇಗೌಡ್ರ ಹೇಳಿದರು.
ತಾಲೂಕಿನ ಚಾಕಲಬ್ಬಿ ಗ್ರಾಮದ ಶ್ರೀ ಆದೀಶಕ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರ ನಿಮಿತ್ತ 21ರಂದು ಬೆಳಗ್ಗೆ 7ರಿಂದ 10-30ರ ವರಗೆ ಆಲಯ ಪ್ರವೇಶ ಹಾಗೂ ವಾಸ್ತು ಶಾಂತಿ ಇರುತ್ತದೆ.
22ರಂದು ಬೆಳಗ್ಗೆ 6 ರಿಂದ 9 ರವರೆಗೆ ಗಂಗಾ ಪೂಜೆ, ಗೋಪೂಜೆ, ದೇಗುಲ ಉದ್ಘಾಟನೆ, ಕಳಶ ಸ್ಥಾಪನೆ ಶ್ರೀಚಂಡಿ, ಹೋಮ ಹವನ ನಡೆಯಲಿವೆ.
23ರಂದು ಬೆಳಗ್ಗೆ 7.30ರಿಂದ 11ರವರೆಗಿನ ಶುಭಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಭವ್ಯ ಮೆರವಣಿಗೆ, ಕಳಸಾರೋಹಣ ಹಾಗೂ ಮುತೆôದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಲಿವೆ. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಶ್ರೀ ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ವೇದ ಜೋತಿಷ್ಯ ಪಂಡಿತರಾದ ಶ್ರೀ ವಿದ್ವಾನ್ ಅಮರೇಶ್ವರ ಸ್ವಾಮಿಗಳು ಹಾಗೂ ಪುರೋಹಿತ ಬಳಗ ಕಂಬಾಳಿಮಠ ಅವರಿಂದ ವೈದಿಕ ಪೌರೋಹಿತ್ಯ ನಡೆಯುವುದು. ಇದಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಭಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಗ್ರಾಪಂ ಮಾಜಿ ಸದಸ್ಯರಾದ ವಿ.ಎಸ್. ಮಸಾಲಿ, ಗ್ರಾಪಂ ಸದಸ್ಯರಾದ ಟೋಪಣ್ಣ ಕಟಗಿ, ವಿಠ್ಠಲ ಘಾಟಗೆ, ಶೇಖಪ್ಪ ಪೂಜಾರ,ಫಕೀರಪ್ಪ ಭಾಗಣ್ಣವರ, ಮಂಜುನಾಥ ಕಂಬಳಿ, ಯಲ್ಲಪ್ಪ ಬಾರಕೇರ, ಸುರೇಶ ಕಟಗಿ, ಸುಭಾಶ ಪೂಜಾರ, ಕೃಷ್ಟನಗೌಡ ಪಾಟೀಲ, ರಮೇಶ ಗೊಂದಣ್ಣೆವರ, ರಮೇಶ ಮಾವಿನಕಾಯಿ, ರಾಮಣ್ಣ ಕಾಳಿ, ಇತರರಿದ್ದರು.