ದೊಡ್ಡಬಳ್ಳಾಪುರ: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದ ಜಯಮಂಗಲಿ ನದಿಯ ಉಗಮ ಸ್ಥಾನದ ಸುತ್ತಮುತ್ತ ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಸಂಶೋಧನೆ ವೇಳೆ ಜೇಡದ ಹೊಸ ಪ್ರಭೇದ ಪತ್ತೆಯಾಗಿದೆ.
ಈ ಜೇಡವನ್ನು ಸ್ಥಳೀಯ ಹೆಸರಿನಿಂದಲೇ ಗುರುತಿಸಬೇಕೆಂಬ ಉದ್ದೇಶದಿಂದ ತೆಂಕಣ ಜಯಮಂಗಲಿ ಎಂದು ಹೆಸರಿಡಲಾಗಿದೆ. (ಝೂಕೀಸ್)ಅಂತಾರಾಷ್ಟ್ರೀಯ ಜೀವವಿಜ್ಞಾನ ನಿಯತಕಾಲಿಕೆಯ ಅ.11ರ ಸಂಚಿಕೆಯಲ್ಲಿ ಈ ಕುರಿತ ಸಂಶೋಧನಾ ಬರಹ ಪ್ರಕಟವಾಗಿದೆ.
ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲದ ಬಳಿ ಸಂಶೋಧನಾ ತಂಡ ಹಲವು ಜೇಡ ಪ್ರಭೇದಗಳ ವಾದರಿಗಳನ್ನು ಸಂಗ್ರಹಿಸಿತ್ತು. ಅದರಲ್ಲಿ ಇದು ಕೂಡ ಒಂದಾಗಿದೆ.
ಸಂಶೋಧನಾ ತಂಡದಲ್ಲಿದ್ದ ಜೇಡ ತಜ್ಞರಾದ ವೈ.ಟಿ.ಲೋಹಿತ್, ಬಿ.ಜಿ.ನಿಶಾ, ಚಿನ್ಮಯ್ ಸಿ.ಮಳಿಯೆ ವಾತನಾಡಿ, ಕೀಟ, ಜೇಡಗಳು ಇಂಗ್ಲಿಷ್, ಲ್ಯಾಟಿನ್ ಹೆಸರುಗಳನ್ನು ಹೊಂದಿದ್ದು, ಉಚ್ಚರಿಸಲು ಹಾಗೂ ನೆನಪಿಡಲು ಕಷ್ಟ. ಈ ಕಾರಣದಿಂದಾಗಿ ಈ ಜೇಡವನ್ನು ತೆಂಕಣ ಜಯಮಂಗಲಿ ಎನ್ನುವ ಹೆಸರಿನಿಂದ ಪರಿಚಯಿಸಿದ್ದೇವೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್) ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆಯನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿದ್ದೇವೆ. ತಂಡದಲ್ಲಿ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇ ಕುಂಟೆ ಮತ್ತು ಕೆನಡಾದ ವೈನೆ ವ್ಯಾಡಿಸನ್ ಕೂಡ ಈ ಸಂಶೋಧನೆಗೆ ಕೈ ಜೋಡಿಸಿದ್ದರು ಎಂದು ಹೇಳಿದರು.
ವಿಭಿನ್ನ ‘ತೆಂಕಣ ಜಯಮಂಗಲಿ’
ಪತ್ತೆ ವಾಡಲಾದ ಹಲವಾರು ಜೇಡಗಳ ವಂಶವಾಹಿ (ಡಿಎನ್‌ಎ) ಜತೆ ಪ್ರಯೋಗಾಲಯದಲ್ಲಿ ಈ ಜೇಡವನ್ನು ಹೋಲಿಕೆ ವಾಡಿ ನೋಡಲಾಗಿದೆ. ಜೇಡಗಳ ಡಿಎನ್‌ಎ ಜತೆ ಇದು ಹೊಂದಾಣಿಕೆ ಆಗಿಲ್ಲ. ಹಾಗೆಯೇ ಈ ಜೇಡದ ಮೈಬಣ್ಣ, ದೇಹದ ವಿನ್ಯಾಸ ಕೂಡ ಇತರ ಜೇಡಗಳಿಗಿಂತ ಭಿನ್ನವಾಗಿದೆ. ಇಂತಹ ವಿಭಿನ್ನ ಹೋಲಿಕೆಗಳ ಆಧಾರದ ಮೇಲೆ ಇದನ್ನು ಹೊಸ ಪ್ರಭೇದದ ಜೇಡ ಎಂದು ಗುರುತಿಸಲಾಗಿದೆ.
ಈ ಕುರಿತ ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಇದಕ್ಕೆ ವಿಶ್ವದ ಇತರ ವಿಜ್ಞಾನಿಗಳ ಸಲಹೆ, ಪ್ರತಿಕ್ರಿಯಿ ವ್ಯಕ್ತವಾದ ನಂತರ ತೆಂಕಣ ಜಯಮಂಗಲಿ ಜೇಡ ಹೇಗೆ ವಿಭಿನ್ನ ಅನ್ನುವುದು ಮತ್ತಷ್ಟು ನಿಖರವಾಗಲಿದೆ ಎಂದು ಜೇಡ ತಜ್ಞರಾದ ವೈ.ಟಿ.ಲೋಹಿತ್ ತಿಳಿಸಿದರು.
" ಪ್ರಬೇಧವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದಾಗಿದೆ. ದೇವರಾಯನದುರ್ಗ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವ ವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿದೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಕಾಡಿನ ಕಣಜದಲ್ಲಿ ಇವೆ. ದೇವರಾಯನದುರ್ಗವನ್ನು ಕೇವಲ ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡಲು ಸಾಧ್ಯವಿಲ್ಲ, ಇದು ಜೀವವೈವಿಧ್ಯತೆಯ ತಾಣವು ಆಗಿದೆ."
ವೈ.ಟಿ.ಲೋಹಿತ್
ಜೇಡಗಳ ತಜ್ಞ. ದೊಡ್ಡಬಳ್ಳಾಪುರ