ಜಿಲ್ಲೆ

ನೂತನ ಎಸ್‌ಪಿ ಎದುರು ಸವಾಲುಗಳ ಸರಮಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಧಿಕಾರ ಸ್ವೀಕಾರ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗಾಂಜಾಘಾಟು, ರಿಯಲ್ ಎಸ್ಟೇಟ್ ಮಾಫಿಯಾ, ಸರಣಿ ಸರಗಳವು, ಅಕ್ರಮ ಮದ್ಯ ಮಾರಾಟ, ಸಂಚಾರ ನಿಯಮ ಉಲ್ಲಂಘನೆ ಅವ್ಯಾಹತ, ರೌಡಿಗಳ ಅಟ್ಟಹಾಸ ಹೀಗೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಎಲ್ಲೆ ಮೀರಿರುವ ಹೊತ್ತಿನಲ್ಲಿ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.


ಬೆಂಗಳೂರಿನ ಗಡಿ ಹಂಚಿಕೊಂಡಿರುವ ನಾಲ್ಕೂ ತಾಲೂಕು ಸೇರಿ ನಗರ ವ್ಯಾಪ್ತಿಯ ಆನೇಕಲ್, ಗ್ರಾಮಾಂತರ ಜಿಲ್ಲೆಗೆ ಸೇರ್ಪಡೆಯಾಗಿದೆ. ಅಪರಾಧ ಚಟುವಟಿಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕುವ ಸವಾಲುಗಳು ಎಸ್‌ಪಿ ಮುಂದಿವೆ. ಆಂಧ್ರ ಹಾಗೂ ತಮಿಳುನಾಡು ಗಡಿಯನ್ನೂ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಅನ್ಯರಾಜ್ಯದ ಪಾತಕಿಗಳ ದುಷ್ಕೃತ್ಯಗಳೂ ಸಾಮಾನ್ಯ ಎನ್ನುವಂತಾಗಿದೆ. ಹೊಸೂರು ಮೂಲಕ ಆನೇಕಲ್ ಗಡಿ ಪ್ರವೇಶಿಸುವ ಹಾಗೂ ಆಂಧ್ರ ಗಡಿಯಿಂದ ಹೊಸಕೋಟೆ ಪ್ರವೇಶಿಸುವ ಗಾಂಜಾ, ರಕ್ತಚಂದನ ಅಕ್ರಮ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮತ್ತಷ್ಟು ಗಟ್ಟಿಯಾಗಬೇಕಿದೆ. ಅಧಿಕಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ ಎಸ್ಪಿ ಅವರು ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.

ಪ್ರಶ್ನೆ: ಗ್ರಾಮೀಣ ಭಾಗದ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿದ್ದು, ನಿಯಂತ್ರಣ ಹೇಗೆ?
ಎಸ್‌ಪಿ: ಇದೊಂದು ಪಿಡುಗಾಗಿರುವುದು ನಮ್ಮ ಗಮನಕ್ಕೂ ಬಂದಿದೆ, ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಂಟಿ ಕಾರ್ಯಾಚರಣೆ ಮೂಲಕ ಇದರ ತಡೆಗೆ ಕ್ರಮಕೈಗೊಳ್ಳಲಾಗುವುದು.

ಪ್ರಶ್ನೆ: ಜಿಲ್ಲೆಯಲ್ಲಿ ಗಾಂಜಾ ಧಂದೆ ಬೇರು ಬಿಟ್ಟಿದೆ, ಆಗಾಗ ಮಾರಾಟ ಆರೋಪಿಗಳನ್ನು ಬಂಧಿಸುವುದು ಜಪ್ತಿ ಮಾಡುವುದು ನಡೆಯುತ್ತಿದೆ. ಪರಿಣಾಮಕಾರಿಯಾಗಿ ಬ್ರೇಕ್ ಹಾಕಲು ಸಾಧ್ಯವಿಲ್ಲವೆ?
ಎಸ್‌ಪಿ: ಖಂಡಿದ ಇದೆ, ಗಾಂಜಾ ದಂಧೆಕೋರರನ್ನು ಬೇರುಸಹಿತ ಕಿತ್ತುಹಾಕುವ ಪ್ರಯತ್ನ ನಡೆಯುತ್ತಿದೆ. ಇದೊಂದು ಗುಪ್ತಜಾಲವಾಗಿದ್ದು, ಸಾರ್ವಜನಿಕರೂ ಪೊಲೀಸರೊಂದಿಗೆ ಕೈಜೋಡಿಸಬೇಕು, ಆಗ ಮಾತ್ರ ಬೇರುಮಟ್ಟದಿಂದಲೇ ಇದಕ್ಕೆ ಕಡಿವಾಣ ಹಾಕಬಹುದು.

  • ಸರಗಳವು ಪ್ರಕರಣ ಸಾಮಾನ್ಯ ಎನ್ನುವಂತಾಗಿದೆ? ಪ್ರತಿನಿತ್ಯ ಒಂದಿಲ್ಲೊಂದು ಕಡೆ ಪ್ರಕರಣಗಳು ವರದಿಯಾಗುತ್ತಲೇ ಇವೆ.
  • ದುಷ್ಕರ್ಮಿಗಳು ಸುಲಭವಾಗಿ ಹಣ ಗಳಿಸಲು ಇಂಥ ಮಾರ್ಗ ಅನುಸರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಪೊಲೀಸ್ ಬೀಟ್ ಹೆಚ್ಚಳ, ಅಪರಿಚಿತರ ಚಲನವಲನಗಳ ಮೇಲೆ ನಿಗಾ ಇಡಲಾಗುವುದು.
  • ಸಂಚಾರ ನಿಯಮ ಅಯೋಮಯವಾಗಿದೆ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆಗೆ ಅಂಕುಶವಿಲ್ಲದಂತಾಗಿದೆ?
  • ಹೌದು, ನೆಲಮಂಗಲದಲ್ಲಿ ಸಂಚಾರ ಠಾಣೆ ಹೊರತುಪಡಿಸಿ ಮೂರು ತಾಲೂಕುಗಳಲ್ಲಿ ಟ್ರಾಫಿಕ್ ಠಾಣೆ ಇಲ್ಲವಾಗಿರುವುದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಹಕಾರಿಯಾಗಿದೆ. ಆದರೂ ಈ ನಿಟ್ಟಿನಲ್ಲಿ ನಗರ, ಪಟ್ಟಣ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗುವುದು.
  • ಜಿಲ್ಲೆಯಲ್ಲಿ ರಿಯಲ್‌ಎಸ್ಟೇಟ್ ಮಾಫಿಯಾ ಹಾವಳಿ ಹೆಚ್ಚಾಗಿದೆ, ಇದು ಕೊಲೆಯಂಥ ಪ್ರಕರಗಳಿಗೂ ದಾರಿಮಾಡಿಕೊಟ್ಟಿದೆ.
  • ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಅಕ್ರಮವಾಗಿ ಯಾವುದೇ ವ್ಯಾಪಾರ ವಹಿವಾಟು ನಡೆಸಿದರೂ ಕಾನೂನು ಕುಣಿಗೆ ಬಿಗಿಯಾಗಲಿದೆ. ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು.
  • ರೌಡಿಗಳ ಅಟ್ಟಹಾಸ, ಸುಲಿಗೆ ಪ್ರಕರಣಗಳು, ಹೆದ್ದಾರಿಗಳಲ್ಲಿ ವಾಹನ ತಡೆದು ದರೋಡೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.

*ಪೊಲೀಸ್ ಬೀಟ್ ಹೆಚ್ಚಿಸುವುದು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ, ಹಳೇ ರೌಡಿಗಳ ಪರೇಡ್, ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ, ಟೋಲ್‌ಗಳ ಮೂಲಕ ಹಾದುಹೋಗುವ ವಾಹನಗಳ ಮೇಲೆ ಕ್ಯಾಮರಾ ಕಣ್ಗಾವಲು, ಇನ್ನೂ ಕೆಲವೊಂದು ವ್ಯವಸ್ಥೆ ಮಾರ್ಪಾಡು ಮಾಡುವ ಮೂಲಕ ಇಂಥ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಲು ಪ್ರಯತ್ನಿಸಲಾಗುವುದು.