ಕುಮಟಾ: ಪಟ್ಟಣದ ಪ್ರಮುಖ ಸಂಚಾರ ದಟ್ಟಣೆ, ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಿ ಸಂಚಾರ ಸಿಕ್ಕು ಸೃಷ್ಟಿಸುವವರನ್ನು ನಿಯಂತ್ರಿಸಿ, ಸುಗಮಗೊಳಿಸಲು ಕುಮಟಾ ಪುರಸಭೆ ಹೊಸ ನಿಯಮಾವಳಿ ರೂಪಿಸಿದ್ದು ಕೂಡಲೇ ಜಾರಿಗೆ ತರಲು ಸಜ್ಜಾಗಿದೆ.
ಪೇಟೆ ರಸ್ತೆಯ ಬಹುತೇಕ ಕಡೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಅಗತ್ಯಕ್ಕೆ ತಕ್ಕಷ್ಟು ವಿಸ್ತಾರವಾಗಿಲ್ಲ. ಬಸ್ ಸಹಿತ ದೊಡ್ಡ ವಾಹನಗಳು ಸಂಚರಿಸುವ ಕೋರ್ಟ್ ರಸ್ತೆ, ಬಸ್ತಿಪೇಟೆ, ನೆಲ್ಲಿಕೇರಿ ಹಳೇ ಬಸ್ ನಿಲ್ದಾಣ ಸಹಿತ ಅಘನಾಶಿನಿ, ಪಿಕಪ್ ಬಸ್ ನಿಲ್ದಾಣ, ಮೀನುಪೇಟೆ ರಸ್ತೆಗಳು ಸದಾ ಟ್ರಾಫಿಕ್ ಸಿಕ್ಕು ಎದುರಿಸುತ್ತಿದ್ದು, ವಾಹನ ದಟ್ಟಣೆ ನಿರ್ವಹಿಸುವುದು ತಲೆನೋವಾಗಿತ್ತು. ಹೀಗಾಗಿ ಶಾಸಕ ದಿನಕರ ಶೆಟ್ಟಿ ಅವರು ಪುರಸಭೆ, ಪೊಲೀಸ್ ಇಲಾಖೆಯೊಟ್ಟಿಗೆ ರ್ಚಚಿಸಿ ಸೂಕ್ತ ಕ್ರಮಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ಎಡ ಮತ್ತು ಬಲಭಾಗಕ್ಕೆ ವಾರಾನುಸಾರ ನಿಗದಿಸಲಾಗಿದೆ.
ಮುಖ್ಯವಾಗಿ ಪಟ್ಟಣದ ರಾ.ಹೆ. 66 ಅನ್ನು ಹೊರತುಪಡಿಸಿ ಪಟ್ಟಣ ವ್ಯಾಪ್ತಿಯಲ್ಲಿ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಸರಕು ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಮಾಸ್ತಿಕಟ್ಟೆ ವೃತ್ತದಿಂದ ಹಳೇ ಅಂಚೆ ಕಚೇರಿವರೆಗೆ ಹಾಗೂ ಮೂರುಕಟ್ಟೆಯಿಂದ ರಥಬೀದಿ ಸಹಿತ ಕೆನರಾ ಬೇಕರಿ ಒಳರಸ್ತೆಯವರೆಗೆ ಮಂಗಳ, ಗುರು, ಶನಿವಾರ ಎಡಭಾಗದಲ್ಲಿ, ಸೋಮ, ಬುಧ, ಶುಕ್ರ, ಭಾನುವಾರ ಬಲಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಏಕಮುಖ ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಲಘುವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಪೈಕಿ ರಥಬೀದಿಯ ವೆಂಕಟ್ರಮಣ ದೇವಸ್ಥಾನದಿಂದ ಕೆನರಾ ಬೇಕರಿ ಕ್ರಾಸ್ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಮೀನುಮಾರುಕಟ್ಟೆಯಿಂದ ವನ್ನಳ್ಳಿ ಕ್ರಾಸ್ವರೆಗೆ ಸೋಮ, ಬುಧ, ಶುಕ್ರ ಮತ್ತು ಭಾನುವಾರ ಎಡಭಾಗದಲ್ಲಿ, ಮಂಗಳ, ಗುರು ಹಾಗೂ ಶನಿವಾರ ಬಲಭಾಗದಲ್ಲಿ ವಾಹನ ನಿಲ್ಲಿಸಬಹುದಾಗಿದ್ದು ಮೀನುಮಾರುಕಟ್ಟೆಯ ಸೇತುವೆಯ ಮೇಲೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ವನ್ನಳ್ಳಿ ಕ್ರಾಸ್ನಿಂದ ಜೈವಂತ ಸ್ಟುಡಿಯೋ ಕ್ರಾಸ್ವರೆಗೆ ಮತ್ತು ಗಿಬ್ ವೃತ್ತದಿಂದ ಬಸ್ತಿಪೇಟೆ ಕ್ರಾಸ್ವರೆಗೆ ಸೋಮ, ಬುಧ, ಶುಕ್ರ ಮತ್ತು ಭಾನುವಾರ ಎಡಭಾಗದಲ್ಲಿ, ಮಂಗಳ, ಗುರು ಹಾಗೂ ಶನಿವಾರ ಬಲಭಾಗದಲ್ಲಿ ವಾಹನ ನಿಲ್ಲಿಸಬಹುದಾಗಿದೆ. ವಾಹನ ನಿಲುಗಡೆ ಸ್ಥಳಗಳ ಸಾರ್ವಜನಿಕರ ತಿಳುವಳಿಕೆಗಾಗಿ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದೆ. ಒಂದೊಮ್ಮೆ ನಿಯಮ ಉಲ್ಲಂಘಿಸಿದಲ್ಲಿ ಪೊಲೀಸ್ರು ಕಾನೂನು ರೀತ್ಯಾ ಕ್ರಮಕೈಗೊಳ್ಳಲಿದ್ದಾರೆ.
ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಸದಸ್ಯ ಟೋನಿ, ವ್ಯವಸ್ಥಾಪಕಿ ಅನಿತಾ ಶೆಟ್ಟಿ ಇತರರು ಇದ್ದರು.
ಪಟ್ಟಣದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತಕ್ಕಾಗಿ ಅನಿವಾರ್ಯವಾಗಿ ವಾಹನಗಳ ನಿಲುಗಡೆಯನ್ನು ಶಿಸ್ತುಬದ್ಧಗೊಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪೊಲೀಸ್ ಸಹಯೋಗದಲ್ಲಿ ಪುರಸಭೆಯಿಂದ ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಿದ್ದೇವೆ. ನಿಗದಿತ ದಿನಗಳಂದು ರಸ್ತೆಯ ಎಡ ಮತ್ತು ಬಲಭಾಗಕ್ಕೆ ಸೀಮಿತವಾಗಿ ವಾಹನ ನಿಲ್ಲಿಸಿದರೆ ಸಂಚಾರ ಸಿಕ್ಕು ತಡೆಯಬಹುದು. | ಸುಮತಿ ಭಟ್, ಕುಮಟಾ ಪುರಸಭೆ ಅಧ್ಯಕ್ಷೆ
ಪಟ್ಟಣದಲ್ಲಿ ಸಂಚಾರ ಕಿರಿಕಿರಿ ದಿನನಿತ್ಯದ ಜಂಜಾಟವಾಗಿದೆ. ಸಾಕಷ್ಟು ದೂರುಗಳು ಬಂದಿದ್ದು ಸರಳ ಪರಿಹಾರ ಕ್ರಮ ಅಳವಡಿಸುವುದು ಅನಿವಾರ್ಯವಾಗಿದೆ. | ಮಹೇಶ ನಾಯ್ಕ, ಪುರಸಭೆ ಉಪಾಧ್ಯಕ್ಷ
ನಿಯಮದಂತೆ ಎಲ್ಲರೂ ವಾಹನ ನಿಲುಗಡೆ ಮತ್ತು ಸಂಚಾರ ಸಿಕ್ಕು ತಡೆಗೆ ಸಹಕಾರ ನೀಡಬೇಕು. ಪಟ್ಟಣದಲ್ಲಿ ವಾಹನ ನಿಲುಗಡೆ ನಿಯಮ ಪಾಲನೆ ಕುರಿತು ಹೆಚ್ಚಿನ ನಿಗಾವಹಿಸಲಾಗುವುದು, ಸಂಚಾರ ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. | ರವಿ ಗುಡ್ಡಿ, ಪಿಎಸ್ಐ