ಜಿಲ್ಲೆ

ಹೊಸ ನಿಯಮದಿಂದ ಶಿಕ್ಷಣ ವ್ಯವಸ್ಥೆಗೆ ಧಕ್ಕೆ

ಹಗರಿಬೊಮ್ಮನಹಳ್ಳಿ: ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) 2025ರ ಉನ್ನತ ಶಿಕ್ಷಣ ಕರಡು ನಿಯಮಗಳ ಪ್ರಸ್ತಾಪವನ್ನು ಎಸ್‌ಎಫ್‌ಐ ತಾಲೂಕು ಸಮಿತಿ ವಿರೋಧಿಸಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ತಾಲೂಕು ಅಧ್ಯಕ್ಷ ದುರುಗೇಶ ಮಾತನಾಡಿ, ಯುಜಿಸಿ ಹೊಸ ನಿಯಮವಳಿಗಳನ್ನು ತಿದ್ದುಪಡಿಮಾಡುವ ಮೂಲಕ, ಕರಡನ್ನು ಜ.6ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಬಿಡುಗಡೆ ಮಾಡಿದ್ದಾರೆ. ಇದು ಕ್ಯಾಂಪಸ್‌ಗಳಲ್ಲಿ ಉನ್ನತ ಶಿಕ್ಷಣವನ್ನು ಕೇಂದ್ರೀಕರಣ ಮತ್ತು ಕಾರ್ಪೊರೇಟ್ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣವಾಗಿ ಅವಕಾಶ ಮಾಡಿಕೊಡುವ ಹುನ್ನಾರವಾಗಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದರು.

ಯುಜಿಸಿ ಕರಡು ಪ್ರತಿಯನ್ನು ಹರಿದು ಹಾಕುವ ಮೂಲಕ ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಸಮಿತಿ ಸದಸ್ಯೆ ಪುಷ್ಪಾವತಿ ಮಾತನಾಡಿ, ಷರತ್ತು 3.8ರಲ್ಲಿ ಬೋಧನೆ ಮತ್ತು ಸಂಶೋಧನೆಯ ಮೇಲೆ ನೇರವಾದ ಪ್ರಭಾವವನ್ನು ಹೊಂದಿರದ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರವು ಸಂಶೋಧನೆಯಿಂದ ತನ್ನದೇ ಆದ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳುತ್ತಿದೆ ಮತ್ತು ವೆಂಚರ್ ಫಂಡ್‌ಗಳ ಹೆಸರಿನಲ್ಲಿ ವಿವಿಧ ಖಾಸಗಿ ಉದ್ಯಮಿಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ದೂರಿದ ಅವರು, ಇದು ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮಾತ್ರ ಸೀಮಿತಗೊಳಿಸುವುದರ ಜೊತೆಗೆ ಕೇಂದ್ರೀಕರಣ, ಖಾಸಗಿಕರಣ ಮತ್ತು ಕಾರ್ಪೊರೇಟ್ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ತಾಲೂಕು ಸಮಿತಿ ಸಂಜನಾ, ವಿಜಯ್, ಪ್ರಜ್ವಲ್ ಇದ್ದರು.