ಜಿಲ್ಲೆ

ಲಾಲ್​ಬಾಗ್​ನಲ್ಲೂ ಹೊಸ ನಿಯಮ!

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ಪ್ರೀ, ಪೋಸ್ಟ್​ ವೆಡ್ಡಿಂಗ್​ ಶೂಟ್ಸ್​, ಬೇಬಿ, ಮಾಡೆಲಿಂಗ್​ ಶೂಟ್ಸ್​, ರೀಲ್ಸ್​ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ಕೆಲವು ತಿಂಗಳ ಹಿಂದೆ ಕಬ್ಬನ್​ ಪಾರ್ಕ್​ನಲ್ಲಿ ಕಠಿಣ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿತ್ತು. ಅದರ ಬೆನ್ನಲ್ಲೇ ಇದೀಗ ಸಸ್ಯಕಾಶಿ ಲಾಲ್​ಬಾಗ್​ನಲ್ಲೂ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಾನದ ಸಂರಕ್ಷಣಾ ದೃಷ್ಟಿಯಿಂದ ಫೋಟೋ, ವೀಡಿಯೋ ಚಿತ್ರೀಕರಣಗಳಿಗೆ ನಿಷೇಧ ಹೇರಲು ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯ ಸಮಿತಿ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಯಾವ ಈತಿಯ ನಿಯಮಗಳನ್ನು ಜಾರಿಗೆ ತರಬೇಕೆಂದು ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಇಲಾಖೆ ನಿರ್ದೇಶಕರು ಅಂತಿಮ ತೀರ್ಮಾನ ಕೈಗೊಂಡ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಇದೊಂದು ಸಾರ್ವಜನಿಕ ಸ್ಥಳವೆಂಬ ಪರಿಜ್ಞಾನವಿಲ್ಲದೆ, ಅಶ್ಲೀಲವಾಗಿ ಇತರರಿಗೆ ಮುಜುಗರ ತರಿಸುವಂತೆ ಫೋಟೋ, ವೀಡಿಯೋ ತೆಗೆಯುವುದು ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರೀಕರಣದ ಭರಾಟೆಯಲ್ಲಿ ಇಲ್ಲಿನ ಸಸ್ಯಗಳಿಗೂ ಹಾನಿ ಉಂಟಾಗಿದೆ. ದೊಡ್ಡ ಮರಗಳಿಗೆ ಏರಿ ಸಾಹಸ ತೋರುವುದರಿಂದ ಮುರಿದು ಬಿದ್ದು ಪ್ರಾಣ ಹಾನಿಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಲಾಲ್​ಬಾಗ್​ನಲ್ಲಿ ಹೆಜ್ಜೇನುಗಳು ಗೂಡುಗಳನ್ನು ಕಟ್ಟಿಕೊಂಡಿವೆ. ಫೋಟೋ ಫ್ಲಶ್​ ಲೈಟ್​ನಿಂದ ಅವುಗಳಿಗೆ ಕಿರಿಕಿರಿಯಾದರೆ ಮನುಷ್ಯನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಕಾನೂನು ಜಾರಿಗೆ ಕಾರಣಗಳನ್ನು ತಿಳಿಸಿದ್ದಾರೆ.