ಜಿಲ್ಲೆ

ಜಪ್ತಿಯಾದ ಟ್ರ್ಯಾಕ್ಟರ್‌ಗಳಿಗೂ ಹೊಸ ನೋಂದಣಿ!

ಗಂಗಾಧರ ಬಿ ವಿ

* ರಾಮನಗರ ಆರ್‌ಟಿಒ ಹಗರಣ ಬಗೆದಷ್ಟೂ ಅಕ್ರಮ ಬಯಲಿಗೆ

* ನಕಲಿ ಬೋನೈಡ್ ದಂಧೆ ಬೇರೆ ಕಚೇರಿಗಳಿಗೂ ವಿಸ್ತರಣೆ

* ಏಜೆಂಟ್ ಸತೀಶ್ ಮನೆಯಲ್ಲಿ 2000 ಆರ್‌ಸಿ ಕಾರ್ಡ್‌ಗಳು ಪತ್ತೆ

ರಾಮನಗರ

ರಾಮನಗರ ಆರ್‌ಟಿಒ ಕಚೇರಿಯಲ್ಲಿ ಬಯಲಾಗಿರುವ ನಕಲಿ ಬೋನಫೈಡ್ ದಂಧೆ ರಾಜ್ಯದ ಬೇರೆಬೇರೆ ಕಚೇರಿಗಳಿಗೂ ವಿಸ್ತರಿಸಿದೆ. ರಾಮನಗರ ಕಚೇರಿ ಮಾತ್ರವಲ್ಲದೆ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲ ಆರ್‌ಟಿಒ ಕಚೇರಿಗಳಲ್ಲೂ ಅಕ್ರಮವಾಗಿ ನೋಂದಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಬ್ಯಾಂಕ್ ಸಾಲ ಮರುಪಾವತಿಸಲಾಗದೆ ಜಪ್ತಿಯಾಗಿ ಮರು ಮಾರಾಟವಾದ ಟ್ರ್ಯಾಕ್ಟರ್‌ಗಳಿಗೂ ಹೊಸ ವಾಹನವೆಂದು ನೋಂದಣಿ ಮಾಡಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ದೃಢಪಟ್ಟಿದೆ.

ರಾಮನಗರ ಆರ್‌ಟಿಒ ಮಧ್ಯವರ್ತಿ, ಬಂಧಿತ ಸತೀಶ್ ಅಲಿಯಾಸ್ ಟ್ರ್ಯಾಕ್ಟರ್ ಸತೀಶ್ ಮನೆಯಲ್ಲಿ 1,500ಕ್ಕೂ ಹೆಚ್ಚು ಕಡತಗಳು ಪತ್ತೆಯಾಗಿವೆ. ಜತೆಗೆ 2,000ಕ್ಕೂ ಅಧಿಕ ಆರ್‌ಸಿ ಕಾರ್ಡ್‌ಗಳು ಸಿಕ್ಕಿವೆ. ರಾಮನಗರ ಆರ್‌ಟಿಒ ಮಾತ್ರವಲ್ಲದೆ ಬೆಂಗಳೂರಿನ ಕೆಲ ಕಚೇರಿಗಳು, ಕೋಲಾರ, ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವ ಆರ್‌ಸಿ ಕಾರ್ಡ್‌ಗಳು ಸಹ ಪತ್ತೆಯಾಗಿರುವುದರಿಂದ ಅಕ್ರಮದ ಆಳ ಇನ್ನಷ್ಟು ಬಯಲಾಗಿದೆ.

ರೈತರ ಹೆಸರಲ್ಲಿ ಬೋನಫೈಡ್ ಸರ್ಟಿಫಿಕೇಟ್‌ಗಳನ್ನು ನಾಡ ಕಚೇರಿಯಲ್ಲಿ ಕೊಡಲಾಗುತ್ತದೆ. ಹೀಗಾಗಿ ಟ್ರ್ಯಾಕ್ಟರ್ ನೋಂದಣಿ ಅಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರ್‌ಟಿಒ ಶಿವಕುಮಾರ್, ಎಫ್ ಡಿಎ ರಚಿತ್ ರಾಜ್ ಹಾಗೂ ಏಜೆಂಟ್ ಸತೀಶ್‌ನನ್ನು ಕೋರ್ಟ್ ಅನುಮತಿ ಮೇರೆಗೆ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ಮಾಡಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ತಿಪಟೂರು ಆರ್‌ಟಿಒ ಕಚೇರಿಯಲ್ಲಿ 2018ರಲ್ಲಿ ತಾತ್ಕಾಲಿಕವಾಗಿ ನೋಂದಣಿಯಾಗಿದ್ದ ಟ್ರ್ಯಾಕ್ಟರ್ 2024ರ ಫೆ. 19ರಂದು ರಾಮನಗರ ಆರ್‌ಟಿಒದಲ್ಲಿ ನೋಂದಣಿಯಾಗಿದೆ. ದಾಂಡೇಲಿ ಆರ್‌ಟಿಒದಲ್ಲಿ 2019ರಲ್ಲಿ ತಾತ್ಕಾಲಿಕವಾಗಿ ನೋಂದಣಿಯಾದ ವಾಹನಕ್ಕೆ 2024 ಫೆ. 20ರಂದು ಹೊಸದಾಗಿ ರಿಜಿಸ್ಟ್ರೇಷನ್ ಆಗಿದೆ. 2021ರಲ್ಲಿ ಮೈಸೂರು ಪೂರ್ವ ಆರ್‌ಟಿಒದಲ್ಲಿ ನೋಂದಣಿಯಾದ 2023 ಆಗಸ್ಟ್‌ನಲ್ಲಿ ರಾಮನಗರ ಕಚೇರಿಯಲ್ಲಿ ಹೊಸದಾಗಿ ನೋಂದಣಿ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

2023ರಲ್ಲೇ ಸಾವಿರ ಟ್ರ್ಯಾಕ್ಟರ್ ನೋಂದಣಿ

2018ರಿಂದ 2023ರವರೆಗೆ ಖರೀದಿಸಿ, ತಾತ್ಕಾಲಿಕ ನೋಂದಣಿ ಸಂಖ್ಯೆಯಲ್ಲಿ ಓಡಾಡುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಹೊಸದಾಗಿ ನೋಂದಣಿ ಮಾಡಲಾಗಿದೆ. ಅದರಲ್ಲೂ 2023ರಲ್ಲೇ ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಅಕ್ರಮವಾಗಿ ನೋಂದಣಿ ಮಾಡಿರುವುದು ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ದಂಧೆಯಲ್ಲಿ ನೋಂದಣಿಯಾಗಿರುವ ಟ್ರ್ಯಾಕ್ಟರ್‌ಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಯಾವ ವಾಹನಕ್ಕೆ ಹೇಗೆಲ್ಲ ನೋಂದಣಿ?

* ಬ್ಯಾಂಕ್ ಸಾಲ ಕಟ್ಟಲಾಗದೆ ಜಪ್ತಿ ಮಾಡಿ, ಪುನಃ ಮಾರಾಟವಾದ ಟ್ರ್ಯಾಕ್ಟರ್‌ಗಳಿಗೂ ಹೊಸ ವಾಹನ ಎಂದು ನೋಂದಣಿ.

* ಬ್ಯಾಂಕ್‌ನಿಂದ ಸಾಲ ಪಡೆದು ಖರೀದಿಸಿದ್ದ ಟ್ರ್ಯಾಕ್ಟರ್‌ಗೆ ಹೊಸದಾಗಿ ರಿಜಿಸ್ಟ್ರೇಷನ್ ಮಾಡಿ, ಕಾರ್ಡ್‌ನಲ್ಲಿ ಸಾಲ ಇರುವ ಬಗ್ಗೆ ನಮೂದಿಸಿಲ್ಲ.

* ಬ್ಯಾಂಕ್‌ನಲ್ಲಿ ಸಾಲ ಇಲ್ಲವೆಂದು ಆರ್‌ಸಿ ಕಾರ್ಡ್ ತೋರಿಸಿ, ಸಾಲ ತೀರಿಸದೆ ಬೇರೊಬ್ಬರಿಗೆ ಟ್ರ್ಯಾಕ್ಟರ್ ಮಾರಾಟ ಮಾಡಿ ವಂಚನೆ.

* ಟ್ರ್ಯಾಕ್ಟರ್ ಖರೀದಿಸಿ, ನೋಂದಣಿ ಮಾಡಿಸದೆ ಓಡಾಡುತ್ತಿದ್ದ ವಾಹನಗಳಿಗೆ ಹೊಸದಾಗಿ ಖರೀದಿ ವಾಹನದಂತೆ ದಾಖಲೆ ಸೃಷ್ಟಿಸಿ ರಿಜಿಸ್ಟ್ರೇಷನ್.

ಹೋಟೆಲ್, ಬಾರ್‌ನಲ್ಲೂ ರಿಜಿಸ್ಟ್ರೇಷನ್?

ನಿಯಮದ ಪ್ರಕಾರ ಪೋರ್ಟಲ್‌ಗೆ ಕೇಸ್ ವರ್ಕರ್ ದಾಖಲಾತಿ ಅಪ್‌ಲೋಡ್ ಮಾಡಬೇಕು. ಅದನ್ನು ಸೂಪರಿಂಟೆಂಡೆಂಟ್ ಪರಿಶೀಲಿಸಬೇಕು. ನಂತರ ಆರ್‌ಟಿಒ ಅಪ್ರೂವ್ ಮಾಡಬೇಕು. ಆದರೆ, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಅನ್ನು ಏಜೆಂಟ್ ಮಧ್ಯವರ್ತಿಗೆ ಕೊಟ್ಟಿದ್ದು, ಆತ ಹೋಟೆಲ್, ಬಾರ್ ಎಲ್ಲೆಂದರಲ್ಲಿ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ನಲ್ಲಿ ಆತನೇ ಅಪ್‌ಲೋಡ್ ಮಾಡಿ, ಆತನೇ ಅಪ್ರೂವ್ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.

ಫೈಲ್‌ಗಳೇ ಇಲ್ಲದೆ ನೋಂದಣಿ

ಆರೋಪಿ ಸತೀಶ್ ಮನೆಯಲ್ಲಿ ಬೇರೆಬೇರೆ ಆರ್‌ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವ ವಾಹನಗಳ ಕಡತಗಳು ಹಾಗೂ ಆರ್‌ಸಿ ಕಾರ್ಡ್‌ಗಳು ಪತ್ತೆಯಾಗಿವೆ. ಹೀಗಾಗಿ ಭೌತಿಕವಾಗಿ ಕಡತಗಳನ್ನು ಪರಿಶೀಲನೆ ನಡೆಸದೇ ನೋಂದಣಿ ಮಾಡಿರುವುದು ಪರಿಶೀಲನೆಯಲ್ಲಿ ಸಾಬೀತಾಗಿದೆ.

ಚಿಕ್ಕನಾಯಕನಹಳ್ಳಿ ವಿಳಾಸದಲ್ಲಿ ತಿಪಟೂರು ಆರ್‌ಟಿಒ ಕಚೇರಿಯಲ್ಲಿ ತಾತ್ಕಾಲಿಕವಾಗಿ ನೋಂದಣಿಯಾಗಿದ್ದ ಟ್ರ್ಯಾಕ್ಟರ್‌ಗೆ ರಾಮನಗರ ಜಿಲ್ಲೆ ವಿಳಾಸದಲ್ಲಿ ನೋಂದಣಿ ಮಾಡಲಾಗಿದೆ. ಹೀಗಾಗಿ ರಾಜ್ಯದ ಬೇರೆಬೇರೆ ಭಾಗಗಳ ಟ್ರ್ಯಾಕ್ಟರ್‌ಗಳಿಗೆ ರಾಮನಗರದಲ್ಲಿ ಕಚೇರಿಯಲ್ಲಿ ನೋಂದಣಿಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.
-ಡಾ.ಕೋನ ವಂಶಿಕೃಷ್ಣ, ಲೋಕಾಯುಕ್ತ ಎಸ್ಪಿ