ಬೆಟ್ಟದಪುರ: ಹಲಗನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೆರೆಗಳನ್ನು ತುಂಬಿಸಲು ಹೊಸ ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಮುತ್ತಿನಮುಳಸೋಗೆ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಚಾಲನೆಯಾಗಿ ಕಾರ್ಯರೂಪದಲ್ಲಿ ಇದೆ. ಆದರೆ ಹಲಗನಹಳ್ಳಿ ವ್ಯಾಪ್ತಿಯ ಸುಮಾರು 25 ಕೆರೆಗಳಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಈ ಭಾಗಕ್ಕೆ 55 ಕೋಟಿ ರೂ.ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗುತ್ತಿದೆ. ಮುಖ್ಯಮಂತ್ರಿಗಳಿಂದ ಅನುಮೋದನೆ ದೊರೆತ ಬಳಿಕ ಅಧಿಕೃತ ಘೋಷಣೆ ಮಾಡಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಈಗಾಗಲೇ ಹಲಗನಹಳ್ಳಿ ಗ್ರಾಮದ ಅಭಿವೃದ್ಧಿಗೆ ಸುಮಾರು 50ಲಕ್ಷ ರೂ. ಅನುದಾನ ನೀಡಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಇನ್ನು 15 ದಿನಗಳಲ್ಲಿ ಕೆಲಸ ಆರಂಭವಾಗಲಿದೆ. ಗ್ರಾಮಸ್ಥರು ಕೇಳಿರುವ ಅಭಿವೃದ್ಧಿ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುವುದು. ಗ್ರಾಮದಲ್ಲಿ ಸದಾ ಕಾಲ ಒಗ್ಗಟ್ಟು ಇರಲಿ. ಯಾವುದೇ ಕಾರಣಕ್ಕೂ ಒಗ್ಗಟ್ಟು ಹೊಡೆಯಲು ಅವಕಾಶ ಮಾಡಿಕೊಡಬೇಡಿ. ನಾನು ಬೇರೆ ರಾಜಕಾರಣಿಗಳ ತರ ಬುರುಡೆ ಬಿಡಲು ಬರುವುದಿಲ್ಲ. ತಾಲೂಕಿನಲ್ಲಿ ವಾಸ್ತವಾಗಿ ಅಭಿವೃದ್ಧಿ ಕೆಲಸಗಳಾಗಿರುವುದು ನನ್ನಿಂದ ಮಾತ್ರ ಎಂದರು.
ಇದೇ ಸಂದರ್ಭದಲ್ಲಿ ಗೊರಹಳ್ಳಿ ಗ್ರಾಮದಲ್ಲಿ ಹಾರಂಗಿ ನಾಲೆ ಮೆಟ್ಲಿಂಗ್ ಕಾಮಗಾರಿ, ಕೌಲನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮತ್ತು ಹರೀನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಶ್ರಯ ಸಮಿತಿ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಮೈಮುಲ್ ನಿರ್ದೇಶಕ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಚಪ್ಪರದಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಶ್ರೀ ಸ್ವಾಮಿ, ಹಲಗನಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ ವೆಂಕಟೇಶ್, ತಹಸೀಲ್ದಾರ್ ನಿಸರ್ಗ ಪ್ರಿಯ ಜೆ, ತಾಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಕುಮಾರ್, ದಿನೇಶ್, ಹಾರಂಗಿ ಇಂಜಿನಿಯರ್‌ಗಳಾದ ಮಂಜುನಾಥ್, ನವೀನ್, ಲ್ಯಾಂಡ್ ಆರ್ಮಿ ಇಂಜಿನಿಯರ್‌ಗಳಾದ ವಿಜಯ್, ಸುಂದರ್ ರಾಜ್, ಪಿಡಿಒಗಳಾದ ಶ್ರೀದೇವಿ, ಪರಮೇಶ್, ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್, ಮುಖಂಡರಾದ ಶ್ರೀನಿವಾಸ್, ರಕ್ಷಿತ್, ಸಿ.ಜೆ.ರವಿ, ಸಿ.ಎನ್.ರಾಜೇಶ್, ಶೇಖರ್, ವಸಂತ್, ಸುಯ್ಯಲ್ ಪಾಷಾ, ಮೂರ್ತಿ, ರಾಜ ಇತರರು ಇದ್ದರು.