ತುಮಕೂರು: ರಾಜ್ಯದ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಟ್ಟರೂ ವಹಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ನೂತನ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ ಎಂದರು.
ಈ ಹಿಂದೆ 5 ವರ್ಷದಲ್ಲಿ ಮಹಾಲಕ್ಷ್ಮೀ ಲೇಔಟ್ ಅನ್ನು ಯಾವ ರೀತಿ ಬದಲಾವಣೆ ಮಾಡಿದ್ದೇನೆಯೋ, ಅದೇ ರೀತಿ ಸಚಿವನಾಗಿ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ. ಎಚ್.ವಿಶ್ವನಾಥ್ ಅವರಿಗೆ ಸ್ಥಾನಮಾನ ಕೊಡುವ ಕುರಿತು ಮುಖ್ಯಮಂತ್ರಿ ಈಗಾಗಲೇ ಎಲ್ಲರ ಜತೆ ಮಾತಾನಾಡಿದ್ದಾರೆ. ಯಾರ ಮನಸ್ಸನ್ನೂ ಸಿಎಂ ನೋಯಿಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಕೊಡುವ ನಿರ್ಧಾರವನ್ನು ನಮ್ಮ ನಾಯಕರು ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಸ್ಪಷ್ಟಪಡಿಸಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡುಶಿವಣ್ಣ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿದೇವರಾಜ್, ಗೋಪಾಲಯ್ಯ ಪತ್ನಿ ಬಿಬಿಎಂಪಿ ಉಪಮೇಯರ್ ಹೇಮಲತಾ ಮತ್ತಿತರರು ಇದ್ದರು.
ಮಂಡ್ಯ ಬಿಜೆಪಿ ಭದ್ರಕೋಟೆ: ಇಷ್ಟು ದಿನ ಮಂಡ್ಯ ಜಿಲ್ಲೆ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯಾಗಿತ್ತು. ಮುಂದಿನ ದಿನದಲ್ಲಿ ಮಂಡ್ಯ ಬಿಜೆಪಿ ಭದ್ರ ಕೋಟೆ ಆಗಲಿದೆ. ಮಂಡ್ಯದ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸುವುದು ನನ್ನ ಮೊದಲ ಗುರಿ. ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ನೂತನ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಈ ಹಿಂದಿನ ಕಾಂಗ್ರೆಸ್ ಸರ್ಕಾರ, ಮೈತ್ರಿ ಸರ್ಕಾರ ಯಾವೊಂದು ಸಕ್ಕರೆ ಕಾರ್ಖಾನೆ ಬಗ್ಗೆ ಗಮನ ಕೊಟ್ಟಿಲ್ಲ. ಶೀಘ್ರದಲ್ಲೇ ಎರಡೂ ಸಕ್ಕರೆ ಕಾರ್ಖಾನೆ ಪುನರಾರಂಭಿಸಿ ರೈತರಿಗೆ ನ್ಯಾಯ ಕೊಟ್ಟು ಶಕ್ತಿ ತುಂಬುತ್ತೇನೆ ಎಂದರು.