ಜಿಲ್ಲೆ

ಭತ್ತದಲ್ಲಿ ಕಳೆ ನಿರ್ವಹಣೆಗೆ ನೂತನ ವಿಧಾನ: ನಿರ್ಮಲ ಭೂಮಾತಾ ಟ್ರಸ್ಟ್ ಸದಸ್ಯ ಅನಂತರಾವ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಭತ್ತದ ಬೆಳೆಯಲ್ಲಿ ಕಳೆ ನಿರ್ವಹಣೆಗೆ ಸರಳ ಸಾಧನವನ್ನು ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರು ನೂತನವಾಗಿ ಪರಿಚಯಿಸಿದ್ದಾರೆ ಎಂದು ನಿರ್ಮಲ ಭೂಮಾತಾ ಟ್ರಸ್ಟ್ ಸದಸ್ಯ ಅನಂತರಾವ್ ಕೆರಗೋಡು ತಿಳಿಸಿದರು.

ಭತ್ತದ ಬೆಳೆಯಲ್ಲಿ ಕಳೆ ಕೀಳಲು ಕೂಲಿಯಾಳುಗಳ ಕೊರತೆಯಿದೆ. ಇದರಿಂದ ರೈತರು ಅನಿವಾರ್ಯವಾಗಿ ವಿಷಕಾರಿ ಕಳೆನಾಶಕ ಪ್ರಯೋಗ ಮಾಡುತ್ತಿರುವುದರಿಂದ ಅನಾರೋಗ್ಯಕಾರಕ ಆಹಾರ ಉತ್ಪಾದಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕೃಷಿ ಕಾರ್ಮಿಕರ ಅಗತ್ಯವಿದ್ದು, ಉತ್ಪಾದನೆಯ ವೆಚ್ಚ ಹೆಚ್ಚಾಗಲಿದೆ. ಸರಳವಾದ ಸರಪಳಿ ಸಾಧನದಿಂದ ಭತ್ತ ನಾಟಿಯಾದ 8 ರಿಂದ 10 ದಿನಗಳ ನಂತರ ಕಳೆ ತೆಗೆಯುವ ಕಾರ್ಯ ಮಾಡಬಹುದಾಗಿದೆ. ಇದರಿಂದ ಕಳೆ ನಿವಾರಣೆ, ಅಂತರ ಬೇಸಾಯ ಮತ್ತು ಮಣ್ಣು ಬಗ್ಗಡ ಮಾಡುವ ಮೂರೂ ಕೆಲಸಗಳು ಒಮ್ಮೆಲೆ ಪೂರ್ಣ ಮಾಡಬಹುದಾಗಿದೆ ಎಂದರು.

ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜಗದೀಶ್ ಮತ್ತು ಸೊಳ್ಳೆಪುರ ಚಂದ್ರಶೇಖರ್ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಸೆ.28ರಂದು ಇದೇ ಕೃಷಿ ಪದ್ಧತಿ ಅಳವಡಿಸಿಕೊಂಡ ಜಮೀನಿನಲ್ಲಿ ರೈತರ ಸಮ್ಮುಖದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದೆ. ಈ ಸಾಧನವು ಅತ್ಯಂತ ಉಪಯೋಗಕರ ಎಂದು ರುಜುವಾತಾಗಿದೆ ಎಂದು ನುಡಿದರು.

ಈ ಸಾಧನವನ್ನು 5 ಅಡಿ ಉದ್ದದ 2.5 ಇಂಚಿನ ಪಿವಿಸಿ ಪೈಪು, 5 ಅಡಿ ಉದ್ದದ ಕಬ್ಬಿಣದ ರಾಡಿಗೆ 2 ಇಂಚು ಅಂತರದಲ್ಲಿ 2.5 ಇಂಚಿನ ಕಬ್ಬಿಣದ ಸರಳು, ಅದರಡಿಗೆ ನೆಟ್ಟು-ಬೋಲ್ಟನ್ನು ಅಳವಡಿಸಿ ತಯಾರಿಸಲಾಗಿದೆ. ಇದು ಸುಮಾರು 16 ಕೆ.ಜಿ ತೂಗಲಿದೆ. ಇದೇ ಸಾಧನವನ್ನು 3 ಅಡಿ ಉದ್ದದ ಅಳತೆಯಲ್ಲಿ ಮಾಡಿಕೊಂಡಲ್ಲಿ 8 ಕೆ.ಜಿಗೆ ತೂಕವನ್ನು ಇಳಿಸಬಹುದಾಗಿದೆ. ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಹಾಗೂ ಇತರೆ ವಿಷಮುಕ್ತ ಕೃಷಿ ಪದ್ಧತಿ ಅನುಸರಿಸಿ ಭತ್ತ ಬೆಳೆಯುವ ರೈತರಿಗೆ ಅನುಕೂಲವಾಗಲದೆಂದು ಒದಗಿಸುವ ದೃಷ್ಠಿಯಿಂದ ಈ ಸಾಧನಕ್ಕೆ 5 ಸಾವಿರ ರೂ ನಿಗದಿ ಮಾಡಲಾಗಿದೆ ಎಂದರು.

ಸೊಳ್ಳೇಪುರ ಚಂದ್ರಶೇಖರ್, ಚಂದನ್‌ಗೌಡ, ಹನಿಯಂಬಾಡಿ ಸೋಮಶೇಖರ್, ದೊಡ್ಡಮಲಗೂಡು ಮಂಜು ಇದ್ದರು.