ಸಂದೀಪ್ ಸಾಲ್ಯಾನ್ ಬಂಟ್ವಾಳ
ಆರು ವರ್ಷದ ಹಿಂದೆ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಭಾರಿ ರಾಜಕೀಯ ವಿವಾದದ ನಡುವೆ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಸದ್ಯ ಹೊಸ ಮೆನುವಿನೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಕೇವಲ 5 ರೂಪಾಯಿಗೆ ಬೆಳಗ್ಗೆ ಮತ್ತು ಸಂಜೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ ಅನ್ನ, ಸಾಂಬಾರ್ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಒಂದೂವರೆ ವರ್ಷ ದಾಟುತ್ತಿದ್ದಂತೆಯೇ ಆಯಾಯ ಜಿಲ್ಲೆಗೆ ತಕ್ಕಂತೆ ಜುಲೈ 1ರಿಂದ ’ಹೊಸ ಮೆನು’ ಜಾರಿಗೊಳಿಸಿದೆ.
ಸೋಮವಾರ ನೀರು ದೋಸೆ ಚಟ್ನಿ ಮತ್ತು ಇಡ್ಲಿ ಸಾಂಬಾರು, ಮಂಗಳವಾರ ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ-ಅವಲಕ್ಕಿ, ಬುಧವಾರ ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ, ಗುರುವಾರ ಇಡ್ಲಿ ಸಾಂಬಾರು ಮತ್ತು ಪಲಾವ್, ಶುಕ್ರವಾರ ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ, ಶನಿವಾರ ಇಡ್ಲಿ ಸಾಂಬಾರು ಮತ್ತು ಬನ್ಸ್, ಭಾನುವಾರ ಇಡ್ಲಿ ಸಾಂಬಾರು ಮತ್ತು ಶೀರಾ ಸಿಗುತ್ತಿದೆ.
ಬೆಳಗ್ಗೆ 7ರಿಂದ 10 ಗಂಟೆ ವರೆಗೆ ಮತ್ತು ಸಂಜೆ 5ರಿಂದ 7 ಗಂಟೆವರೆಗೆ ಬಿಸಿ ಬಿಸಿ ತಿಂಡಿ ಕೇವಲ 5 ರೂಪಾಯಿಗೆ ಇಲ್ಲಿ ಸಿಗುತ್ತಿದೆ. ಮಧ್ಯಾಹ್ನ 12.30ರಿಂದ 3 ಗಂಟೆ ತನಕ ಚಪಾತಿ ಸಹಿತ ಊಟ ಸಿಗುತ್ತಿದೆ. ಈ ಹಿಂದೆ 10 ರೂಪಾಯಿಗೆ ಕುಚಲಕ್ಕಿ ಅನ್ನ ಸಾಂಬಾರು ಜತೆಗೆ ಉಪ್ಪಿನಕಾಯಿ ಮತ್ತು ಪಲ್ಯ ಸಿಗುತ್ತಿತ್ತು. ಇದೀಗ 10 ರೂಪಾಯಿ ಊಟದ ಜೊತೆಗೆ ಹೆಚ್ಚುವರಿ 10 ರೂ. ಪಾವತಿಸಿದರೆ ಎರಡು ಚಪಾತಿ ಮತ್ತು ಬಟಾಟೆ ಬಾಜಿಯೂ ಸಿಗುತ್ತಿದೆ.
ಈ ನಡುವೆ ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜತೆಗೆ ಪಾಯಸವೂ ಸಿಗುತ್ತಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
ಕಳೆದ ಐದಾರು ವರ್ಷಗಳಲ್ಲಿ ಕೇವಲ 200 ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದು, ಈ ಪೈಕಿ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜು.1ರಿಂದ 250ರಿಂದ 300 ಮಂದಿ ಬರುತ್ತಿದ್ದಾರೆ. ಇದರಿಂದಾಗಿ ಚಪಾತಿ ಬೇಗನೆ ಖಾಲಿಯಾಗುತ್ತಿದೆ. ಸದ್ಯ ವಿವಿಧ ಇಲಾಖೆಗಳಿಗೆ ಬರುವ ಗ್ರಾಮೀಣ ಜನರು ಮಾತ್ರವಲ್ಲದೆ ಅಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಾ ಬರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಆನಂದ ಪೂಜಾರಿ ಮತ್ತು ಅಬ್ದುಲ್ ರಝಾಕ್.
ಕಳೆದ ಐದಾರು ವರ್ಷಗಳಿಂದಲೂ ಕೇವಲ ನಾಲ್ಕು ಸಿಬ್ಬಂದಿ ಇದ್ದೇವೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿಯೂ ರಜೆ ಹಾಕದೆ ನಿಷ್ಠೆಯಿಂದ ದುಡಿದಿದ್ದೇವೆ. ಸದ್ಯ ಗ್ರಾಹಕರು ಹೆಚ್ಚಾದಂತೆ ಸಿಬ್ಬಂದಿ ಹೆಚ್ಚಳವೂ ಅಗತ್ಯವಿದೆ. ಇಲ್ಲಿನ ಫ್ರಿಜ್ ಕೆಟ್ಟು ಎರಡು ವರ್ಷ ಕಳೆದರೂ ದುರಸ್ತಿಗೊಳಿಸಿಲ್ಲ. ನಮಗೆ ವೇತನ ಹೆಚ್ಚಳದ ಜತೆಗೆ ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಇತ್ತೀಚೆಗೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಜಯ ಪೂಜಾರಿ ಮತ್ತು ಚಂದ್ರಾವತಿ ಅಳಲು ತೋಡಿಕೊಂಡಿದ್ದಾರೆ. ಈ ಕ್ಯಾಂಟೀನ್‌ಗೆ ಸುಣ್ಣ-ಬಣ್ಣ ನೀಡಿ ಸುಂದರಗೊಳಿಸುವ ಅಗತ್ಯವಿದೆ ಎಂಬ ಸಲಹೆ ಗ್ರಾಹಕರಿಂದ ಕೇಳಿ ಬಂದಿದೆ.