ಜಿಲ್ಲೆ

ಜಂತ್ರ ತಂಗುದಾಣಕ್ಕೆ ಹೊಸರೂಪ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಬೆಳ್ಮಣ್‌ನಿಂದ ಶಿರ್ವ ಮಾರ್ಗವಾಗಿ ಉಡುಪಿ ಸಂಪರ್ಕಿಸುವ ಜಂತ್ರ ಎಂಬಲ್ಲಿ ರಾಜ್ಯ ಹೆದ್ದಾರಿ ಸಮೀಪದಲ್ಲಿ ತೀರಾ ಶಿಥಿಲಾವಸ್ಥೆಗೆ ತಲುಪಿಸಿ ಕುಸಿಯುವ ಹಂತದಲ್ಲಿದ್ದ ಬಸ್ ತಂಗುದಾಣಕ್ಕೆ ಕೊನೆಗೂ ದುರಸ್ತಿ ಭಾಗ್ಯ ದೊರೆತಿದೆ. ಈ ಭಾಗದ ಪ್ರಯಾಣಿಕರಿಗೆ ಮಳೆ-ಬಿಲಿಸಿನಿಂದ ಆಶ್ರಯ ಪಡೆಯಲು ಅನುಕೂಲವಾಗಲೆಂದು ಬಸ್ ತಂಗುದಾಣ ನಿರ್ಮಿಸಿ ಕೊಟ್ಟಿದ್ದ ಬೆಳ್ಮಣ್ ಜೆಸಿಐ ಘಟಕವೇ ಇದೀಗ ದುರಸ್ತಿ ಮಾಡಿ ಕೊಟ್ಟಿದೆ. ಬಿರುಕು ಬಿಟ್ಟಿದ್ದ ಮೇಲ್ಛಾವಣಿಯನ್ನು ದುರಸ್ತಿಗೊಳಿಸಿದ್ದು, ಸುಣ್ಣಬಣ್ಣ ಬಳಿದು ಹೊಸರೂಪ ನೀಡಲಾಗಿದೆ. ಬೆಳ್ಮಣ್ ಜೆಸಿಐ ಘಟಕದ ಈ ಕಾರ್ಯ ಗ್ರಾಮಸ್ಥರ ಮೆಚ್ಚುಗೆ ಪಡೆದುಕೊಂಡಿದೆ. ಹಲವು ವರ್ಷಗಳ ಹಿಂದೆಯಷ್ಟೇ ಬೆಳ್ಮಣ್ ಜೆಸಿಐ ಘಟಕ ಬಸ್‌ನಿಲ್ದಾಣ ನಿರ್ಮಿಸಿ ಸ್ಥಳೀಯಾಡಳಿತಕ್ಕೆ ಹಸ್ತಾಂತರಿಸಿತ್ತು. ಆದರೆ ಸ್ಥಳೀಯಾಡಳಿತ ಸೂಕ್ತ ನಿರ್ವಹಣೆ ಮಾಡಿರಲಿಲ್ಲ. ಇದರಿಂದಾಗಿ ಕಾಲಕ್ರಮೇಣ ಕಟ್ಟಡ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿತ್ತು. ಮಳೆಗಾಲದಲ್ಲಿ ನೀರು ಸೋರುತ್ತಿದ್ದರಿಂದ ಪ್ರಯಾಣಿಕರು ತೀರ ಸಮಸ್ಯೆ ಎದುರಿಸುವಂತಾಗಿತ್ತು. ತಂಗುದಾಣದ ಒಳಗೇ ಛತ್ರಿ ಹಿಡಿದು ನಿಲ್ಲುವ ಸ್ಥಿತಿ ಎದುರಾಗಿತ್ತು. ಆದರೂ ಸ್ಥಳೀಯಾಡಳಿತ ಮಾತ್ರ ದುರಸ್ತಿ ಕಾರ್ಯಕ್ರೆ ಮುಂದಾಗಿರಲಿಲ್ಲ.

ವಿಜಯವಾಣಿಯಿಂದ ಸಮಗ್ರ ವರದಿ

ಜಂತ್ರ ಬಸ್ ತಂಗುದಾಣದ ದುಸ್ಥಿತಿ ಕುರಿತು ವಿಜಯವಾಣಿಯು ಜೂನ್ 4ರಂದು ಸಮಗ್ರ ವರದಿ ಪ್ರಕಟಿಸಿ ನೈಜ ಸ್ಥಿತಿಯನ್ನು ಬೆಳಕಿಗೆ ತಂದಿತ್ತು. ವರದಿ ಗಮನಿಸಿದ ಬೆಳ್ಮಣ್ ಜೆಸಿಐ ಘಟಕ ಇದೀಗ ದುರಸ್ತಿ ಮಾಡಿಕೊಟ್ಟಿದೆ.

ಇಲ್ಲಿನ ತಂಗುದಾಣ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಸ್ತುತ ಇರುವ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲೂ ಕುಸಿದು ಅಪಾಯವಿತ್ತು. ಈ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಜೇಸಿಐ ಬೆಳ್ಮಣ್ ಘಟಕ ತಂಗುದಾಣವನ್ನು ದುರಸ್ತಿ ಮಾಡಿರುವುದು ಶ್ಲಾಘನೀಯ. ರಂಜಿತ್, ಸ್ಥಳೀಯ ಹಲವು ವರ್ಷಗಳ ಹಿಂದೆ ಈ ತಂಗುದಾಣ ನಿರ್ಮಿಸಲಾಗಿತ್ತು. ಬಳಿಕ ನಿರ್ವಹಣೆ ಕೊರತೆಯಿಂದ ಶಿಥಿಲವಾಸ್ಥೆಗೆ ತಲುಪಿತ್ತು. ಇದೀಗ ಮತ್ತೆ ತಂಗುದಾಣ ನವೀಕರಿಸಲಾಗಿದೆ. ಪ್ರದೀಪ್ ಶೆಟ್ಟಿ, ಬೆಳ್ಮಣ್ ಜೇಸಿಐ ಅಧ್ಯಕ್ಷ