ಸಿರಗುಪ್ಪದಲ್ಲಿ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ರಾರಾವಿ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಹೊಸ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡದಂತೆ ಸಿರಗುಪ್ಪ ಗ್ರೇಡ್-2 ತಹಸೀಲ್ದಾರ್‌ಗೆ ರಾರಾವಿ ಗ್ರಾಮಸ್ಥರ ಮನವಿ

ಸಿರಗುಪ್ಪ: ಗ್ರಾಮದಲ್ಲಿ ಹೊಸ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ರಾರಾವಿ ಗ್ರಾಮಸ್ಥರು ಮಂಗಳವಾರ ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಮನವಿ ಸಲ್ಲಿಸಿದರು.

ಮುಖಂಡ ಎನ್.ಸೋಮಯ್ಯ ಮಾತನಾಡಿ, ಗ್ರಾಮದಲ್ಲಿ ಸದ್ಯ ಒಂದು ಮದ್ಯದಂಗಡಿ ಇದೆ. ಅದನ್ನು ತೆರವುಗೊಳಿಸುವಂತೆ ತಾಲೂಕು ಕಚೇರಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಇನ್ನೊಂದು ಮದ್ಯದಂಗಡಿ ಆರಂಭಿಸುವ ವಿಚಾರ ಗೊತ್ತಾಗಿದೆ. ಗ್ರಾಮದಲ್ಲಿ ಕೋವಿಡ್ ಕಾರಣದಿಂದ ಜನರ ಬದುಕು ದುಸ್ತರವಾಗಿದೆ.

ಇಂತಹ ಸಮಯದಲ್ಲಿ ಮದ್ಯದಂಗಡಿಗಳು ಹೆಚ್ಚಾದರೆ ಕೂಲಿ ಕೆಲಸವಿಲ್ಲದೆ ಜನರು ಕುಡಿತಕ್ಕೆ ದಾಸರಾಗುವ ಸಾಧ್ಯತೆ ಇದೆ. ಆದ್ದರಿಂದ ಹೊಸ ಮದ್ಯದ ಅಂಗಡಿಗೆ ಅನುಮತಿ ನೀಡದೆ ನೆಮ್ಮದಿ ಬದುಕಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಯಲ್ಲಪ್ಪ ನಾಯಕ, ಲಕ್ಷ್ಮಣ, ಬಸಪ್ಪ, ವೆಂಕಟೇಶ, ಹನುಮಂತ, ಯಲ್ಲಪ್ಪ, ಚನ್ನಬಸವ, ಶ್ರೀಧರ, ಜಮೀನ್ದಾರ, ಪಕ್ಕೀರ ಇದ್ದರು.