ಉಡುಪಿ: ಬ್ರೀಟಿಷರ ಕಾಲದ ಐಪಿಸಿ, ಸಿಆರ್ಪಿಸಿ, ಎವಿಡೆನ್ಸ್ ಆ್ಯಕ್ಟ್ಗೆ ಬದಲಾಗಿ ಹೊಸದಾಗಿ ಜಾರಿಯಾಗುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ನ್ಯಾಯ ಸಂಹಿತೆ ಕಾನೂನಿನಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಇದರಿಂದ ಸಂತ್ರಸ್ತರು ನ್ಯಾಯ ವಂಚಿತರಾಗುತ್ತಾರೆ. ಇದು ಅರಾಜಕತೆಗೆ ದಾರಿಯಾಗುತ್ತದೆ ಎಂದು ಹಿರಿಯ ವಕೀಲ ಎಂ.ಶಾಂತಾರಾಮ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ವಕೀಲರ ಸಂಘ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಯೋಗದೊಂದಿಗೆ ಭಾರತೀಯ ದಂಡ ಕ್ರಿಯಾ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ ಕಾನೂನುಗಳ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಬ್ರೀಟಿಷರು ರಚಿಸಿದ ಮೂರು ಕಾನೂನುಗಳಲ್ಲಿ ಮಾನವಹಕ್ಕುಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ ಹೊಸ ಕಾನೂನಿನಲ್ಲಿ 3 ರಿಂದ 7ವರ್ಷದೊಳಗಿನ ಶಿೆ ಹೊಂದಿರುವ ಪ್ರಕರಣಗಳಲ್ಲಿ ಎ್ಐಆರ್ ದಾಖಲಿಸಲು 14 ದಿನ ಕಾಲಾವಕಾಶ ನೀಡಿರುವುದು ಸರಿಯಲ್ಲ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ ಎಂದರು.
ಭಾರತೀಯ ದಂಡ ಕ್ರಿಯಾ ಸಂಹಿತೆ ಕಾನೂನುಗಳನ್ನು ಬದಲಾಯಿಸುವಂತೆ ಜನರಿಂದ ಯಾವುದೇ ಒತ್ತಾಯಗಳು ಬಂದಿಲ್ಲ. ಯಾವುದೇ ಪಕ್ಷಗಳ ಪ್ರಣಾಳಿಕೆಯಲ್ಲೂ ಆ ಬೇಡಿಕೆ ಇರಲಿಲ್ಲ. ಆದರೂ ಏಕಾಏಕಿ ಈ ಹೊಸ ಕಾನೂನುಗಳನ್ನು ಜನರ ಮೇಲೆ ಏರಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅದರಂತೆ ಹಲವು ಕಾನೂನುಗಳಿಗೆ ತಿದ್ದುಪಡಿ ಮಾಡಬಹುದಿತ್ತು. ಆದರೆ ಇಡೀ ಕಾನೂನುಗಳನ್ನೇ ಬದಲಾಯಿಸುವ ಅಗತ್ಯ ಇರಲಿಲ್ಲ ಎಂದರು.
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭೋಗ್ ಮಾತನಾಡಿ, ಹೊಸ ಕಾನೂನು ರೂಪಿಸುವ ಸಂದರ್ಭದಲ್ಲಿ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ತಜ್ಞರೊಂದಿಗೆ ಚರ್ಚಿಸಿ ಜಾರಿಗೊಳಿಸಬೇಕು. ಏಕಾಏಕಿ ಕಾನೂನು ಜಾರಿಗೆ ಹೊರಟಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಆದರೂ ಹೊಸ ಕಾನೂನಿನಲ್ಲಿ 40ಕ್ಕೂ ಅಧಿಕ ಉತ್ತಮ ಅಂಶಗಳನ್ನು ದಾಖಲಿಸಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.