ಜಿಲ್ಲೆ

ಮಾ.2ಕ್ಕೆ ನವ ಕರ್ನಾಟಕ ನಿರ್ಮಾಣ ಆಂದೋಲನ

ಶಿವಮೊಗ್ಗ: ರೈತ ಚಳವಳಿ, ದಲಿತ ಚಳವಳಿ, ಕನ್ನಡ ಭಾಷಾ ಚಳುವಳಿ, ಮಹಿಳಾ ಚಳವಳಿ, ವಿದ್ಯಾರ್ಥಿ-ಯುವಜನರ ಚಳವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಸ್ಥಾಪನೆಗೆ ನವ ಕರ್ನಾಟಕ ನಿರ್ಮಾಣ ಆಂದೋಲನವನ್ನು ಮಾ.2ರಂದು ಬೆಳಗ್ಗೆ 10.30ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಶಿವಪ್ಪ ಹೇಳಿದರು.

2028ರ ವಿಧಾನಸಭೆ ಚುನಾವಣೆಗೆ ಜನರ ನಡುವೆ ಜನತಾ ಪ್ರಣಾಳಿಕೆಯನ್ನು ಚರ್ಚೆಗೆ ನೀಡಲಾಗುತ್ತಿದೆ. ಜನತೆ ನೀಡಿದ ಸಲಹೆಗಳನ್ನು ಆಲಿಸಿ, ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಖಾಮುಖಿಯಾಗಿ ಚರ್ಚಿಸಲು ಹಲವು ರಾಜ್ಯಗಳ ನಾಯಕರು ಶಿವಮೊಗ್ಗಕ್ಕೆ ಬರಲಿದ್ದಾರೆ. ಅದಾದ ಬಳಿಕ ಜನತಾ ಪ್ರಣಾಳಿಕೆಯನ್ನು ಬೃಹತ್ ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಈ ಜನತಾ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ರಾಜಕೀಯ ಕಾರ್ಯವನ್ನು ಆರಂಭಿಸಲಾಗುವುದು. 2028ರಲ್ಲಿ ದೆಹಲಿ ಹೈಕಮಾಂಡ್‌ನಿಂದ ಮುಕ್ತವಾದ ಕರ್ನಾಟಕದ ಶ್ರೇಯೋಭಿವೃದ್ಧಿಗೆ ಬದ್ಧವಾದ ಪಕ್ಷವೊಂದನ್ನು ಅಧಿಕಾರಕ್ಕೆ ತರುವ ಕಲ್ಪನೆಯೊಂದಿಗೆ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು.

ಇಡೀ ರಾಜ್ಯ ಎರಡು ರಾಷ್ಟ್ರೀಯ ಪಕ್ಷಗಳ ಕೈಗೆ ಸಿಲುಕಿ ನಲುಗಿದೆ. ಆದರೆ ಶೋಷಿತ, ಪೀಡಿತ, ವಂಚಿತ ವರ್ಗಗಳಲ್ಲಿರುವ ಹೋರಾಟಗಾರರು, ಬುದ್ಧಿಜೀವಿಗಳೆಲ್ಲರೂ ಒಂದೆಡೆ ಕುಳಿತು ಗಂಭೀರವಾಗಿ ಚರ್ಚಿಸಿ ಹೊಸದೊಂದು ಮತ್ತು ಸೌಹಾರ್ದತೆ ಮೂಡಿಸಿ, ಅಭಿವೃದ್ಧಿ ಸಾಧಿಸಬಲ್ಲ ಪ್ರಾದೇಶಿಕ ರಾಜಕೀಯ ಪಕ್ಷವನ್ನು ರೂಪಿಸಬೇಕೆನ್ನುವುದು ನಮ್ಮೆಲ್ಲರ ನಿರ್ಧಾರವಾಗಿದೆ ಎಂದು ಹೇಳಿದರು.

ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ) ರಾಜ್ಯ ಗೌರವಾಧ್ಯಕ್ಷ ಮಂಜುನಾಥ ಗೌಡ, ಪ್ರಮುಖರಾದ ಬಿ.ಪಿ.ಅಮೃತ್, ಅಕ್ಷರ್ ಪಾಶಾ, ಲೋಕೇಶ್ ತಮ್ಮಡಿಹಳ್ಳಿ, ಪ್ರೊ. ಕೃಷ್ಣಪ್ಪ, ಈಶ್ವರಪ್ಪ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.