ಜಿಲ್ಲೆ

ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗಾವಕಾಶ

ಮಂಜುನಾಥ ತಿಮ್ಮಯ್ಯ

ಮೈಸೂರು: ಸಾಂಪ್ರದಾಯಿಕ ಕೆಲಸಗಳ ಪ್ರಮಾಣ ಕ್ರಮೇಣ ಕಡಿಮೆಯಾಗಿ ಕೌಶಲಾಧರಿತ ಉದ್ಯೋಗಗಳು ಹೆಚ್ಚಾಗಲಿದ್ದು ಭವಿಷ್ಯದ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ಕುಶಲತೆಯನ್ನು ಯುವ ಜನರು ಕರಗತ ಮಾಡಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.


ಗ್ರಾಮ್ ಸಂಸ್ಥೆ, ಹನ್ಸ್ ಸೀಡೆಲ್ ಫೌಂಡೇಷನ್(ಎಚ್‌ಎಸ್‌ಎಫ್), ಮೈವಿವಿ ಸಮಾಜಕಾರ್ಯ ಅಧ್ಯಯನ ವಿಭಾಗ, ಜಿಎಸ್‌ಎಸ್ ಪ್ರಾಜೆಕ್ಟ್ ಸಹಯೋಗದಲ್ಲಿ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಇದು ತಂತ್ರಜ್ಞಾನದ ಜಗತ್ತು. ಮಾಹಿತಿ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಈ ಹಿಂದೆ ಜ್ಞಾನ ಇದ್ದರೆ ಸಾಕು ಎನ್ನುತ್ತಿದ್ದರು. ಬಳಿಕ ಭಾವನಾತ್ಮಕ ಜ್ಞಾನಕ್ಕೆ ಬೇಡಿಕೆ ಬಂತು. ಇದೀಗ ಕೃತಕಬುದ್ಧಿಮತ್ತೆಯ ಜ್ಞಾನ ಬಳಕೆಯಾಗುತ್ತಿದೆ. ಇದನ್ನು ಆಧರಿಸಿ ಜ್ಞಾನ, ಚಿಂತನೆ ಬೆಳೆಯುತ್ತಿದೆ. ವಿವಿಧ ಕೆಲಸಗಳಿಗೆ ಎಐ ತಾಂತ್ರಿಕತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಯುವಜನರು ಸಜ್ಜಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.


ಈ ಹಿಂದೆ ಬಳಕೆಗೆ ಬಂದ ಕಂಪ್ಯೂಟರ್ ವಿರುದ್ಧ ಆತಂಕಸೃಷ್ಟಿಯಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ಆದರೆ, ಹಾಗೆ ಆಗಲಿಲ್ಲ. ಬದಲಿಗೆ ಹೊಸ ಉದ್ಯೋಗಗಳು ಸೃಷ್ಟಿಯಾದವು. ಈಗಲೂ ಹಾಗೆಯೇ ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಹೇಳಿದರು.


ಜಪಾನ್, ಅಮೆರಿಕದಲ್ಲಿ ಕೌಶಲಾಭಿವೃದ್ಧಿ ಪ್ರಮಾಣ ಶೇ.92ರಷ್ಟಿದೆ. ಹೀಗಾಗಿ, ಅಲ್ಲಿ ಉನ್ನತ ಶಿಕ್ಷಣ ಪಡೆದ ಬಹುತೇಕರಿಗೆ ಉದ್ಯೋಗ ದೊರೆಯುತ್ತಿದೆ. ಆದರೆ, ಭಾರತದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಈ ಪ್ರಮಾಣ ದೇಶದಲ್ಲಿ ಕೇವಲ ಶೇ.12ರಷ್ಟಿದೆ. ಉನ್ನತ ಶಿಕ್ಷಣ ಪಡೆದ ಎಲ್ಲರಿಗೂ ನಮ್ಮಲ್ಲಿ ಉದ್ಯೋಗ ಸಿಗುತ್ತಿಲ್ಲ. ಇದುವೆೇ ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತಿದೆ. ಕೌಶಲಾಧಾರಿತ ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದರು.


ಭಾರತದಲ್ಲಿ ವರ್ಷಕ್ಕೆ ಅಂದಾಜು 3 ಕೋಟಿಯಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಇದು ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ದೇಶಕ್ಕೆ ಮಾನವ ಸಂಪನ್ಮೂಲವೆ ದೊಡ್ಡ ಶಕ್ತಿ. ಹೀಗಾಗಿ, ಯುವ ಜನರು ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ಅವಕಾಶಗಳು ಯಾವತ್ತೂ ಹುಡುಕಿಕೊಂಡು ಬರಲ್ಲ. ಅದನ್ನು ಹುಡುಕಿಕೊಂಡು ನಾವುಗಳು ಹೋಗಬೇಕು. ಕೌಶಲ ಕಲಿಕೆಗೆ ಒತ್ತು ನೀಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.


ಎಚ್‌ಎಸ್‌ಎಫ್ ಭಾರತದ ಪ್ರತಿನಿಧಿ ಜುಡಿತ್ ವೈನಬರ್ಗರ್ ಸಿಂಗ್ ಮಾತನಾಡಿ, ಇದು ಯುವ ಜನರ ಯುಗ. ನವಪೀಳಿಗೆ ಮಾನವ ಉಪಕರಣಗಳಲ್ಲ, ಅದುವೇ ಶಕ್ತಿ. ಜಗತ್ತಿನ ಸುಸ್ಥಿರ ಅಭಿವೃದ್ಧಿಗೆ ಇದು ಬಳಕೆಯಾಗಬೇಕು. ಡಿಜಿಟಲ್ ಮಾಧ್ಯಮದ ವಾಸ್ತುಶಿಲ್ಪಿಗಳು ಯುವಜನರು. ಈ ಮಾಧ್ಯಮವೇ ಅವರ ಕ್ರಿಯೆ, ಆಲೋಚನೆ, ಪ್ರಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ. ಈ ತಂತ್ರಜ್ಞಾನ ಬಳಸಿಕೊಂಡು ಜಾಗತಿಕ ತಲ್ಲಣಗಳಿಗೆ ಸ್ಥಳೀಯ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ಈ ಮೂಲಕ ಸುಸ್ಥಿರ ಪ್ರಗತಿಗೆ ಕೊಡುಗೆಯನ್ನು ನೀಡಲು ಸಿದ್ಧರಾಗಬೇಕು ಎಂದರು.


ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಪ್ರಮುಖವಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಅವರು ಮುಂದುವರಿಯಬೇಕು. ಉತ್ತಮ ಸಮಾಜ ನಿರ್ಮಾಣದಲ್ಲೂ ಯುವ ಶಕ್ತಿ ಕೈಜೋಡಿಸಬೇಕು. ಸರ್ಕಾರದ ನೀತಿ, ನಿಯಮಗಳ ಅನುಷ್ಠಾನದಲ್ಲಿ ಯುವಜನರ ಪಾತ್ರ ಪ್ರಮುಖವಾಗಿದ್ದು, ಜನಪ್ರತಿನಿಧಿಗಳ ಜತೆ ಜನರ ಸಹಭಾಗಿತ್ವ ಅವಶ್ಯ ಎಂದರು.

ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಸವರಾಜು ಆರ್.ಶ್ರೇಷ್ಠ, ಮೈವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಚ್.ಪಿ.ಜ್ಯೋತಿ ಇದ್ದರು.