ಜಿಲ್ಲೆ

ನವ ಆವಿಷ್ಕಾರಗಳತ್ತ ಮುಖಮಾಡಿ - ಪ್ರೊ. ಎಂ. ರಾಮಚಂದ್ರಗೌಡ

ಬೆಳಗಾವಿ: ಆಧುನಿಕ ತಂತ್ರಾಂಶಗಳ ಸಮರ್ಪಕ ಬಳಕೆ ಮೂಲಕ ಸಂಶೋಧನೆಯ ಭಿನ್ನ ಉಪಕ್ರಮಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಹೊಸ ಅನ್ವೇಷಣೆ, ನವ ಆವಿಷ್ಕಾರಗಳತ್ತ ಯುವಜನತೆ ಮುಖ ಮಾಡಬೇಕು ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ಸಲಹೆ ನೀಡಿದ್ದಾರೆ.

ನಗರದ ರಾಣಿ ಚನ್ನಮ್ಮ ವಿವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಧುನಿಕ ತಂತ್ರಾಂಶಗಳ ಬಳಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬರವಣಿಗೆ ಮತ್ತು ಸಂಶೋಧನಾ ಪ್ರಕಟಣೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಯುವಿಕೆ ಅವಶ್ಯ ಎಂದರು.

ಕ.ವಿ.ವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಸಂಗಮ್ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯ ಭಾಗವಾಗಿ ಪರಿಗಣಿಸಲ್ಪಡುವ ಸಂಶೋಧನೆಯು ಜ್ಞಾನ ಶಾಖೆಯಾಗಿದೆ. ಆಕರಗಳ ನಿರ್ಮಾಣ ಮತ್ತು ಅವುಗಳ ನೈಜ ಶೋಧದಿಂದ ಮಾತ್ರ ಸದ್ಯದ ಜಾಗತಿಕ ವಿದ್ಯಮಾನ ಅರಿಯಲು ಸಾಧ್ಯ. ಸಂಶೋಧನಾ ಅಧ್ಯಯನಗಳು ವೈಜ್ಞಾನಿಕತೆಗೆ ಅನುಗುಣವಾಗಿ ಪೂರಕ ಪ್ರಸಾರದಲ್ಲಿ ಸಾಗಬೇಕು ಎಂದರು.

ಡಾ.ಗೋಪಕುಮಾರ, ಪ್ರೊ.ವಿನಾಯಕ ಬಂಕಾಪುರ, ಡಾ. ಕಿರಣ ಸವಣೂರು, ವಿವಿ ಕುಲಸಚಿವ ಪ್ರೊ.ಬಸವರಾಜ ಪದ್ಮಸಾಲಿ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಎಸ್.ಎಂ. ಹುರಕಡ್ಲಿ , ಪ್ರೊ. ಡಿ.ಎನ್. ಪಾಟೀಲ, ಪ್ರೊ.ಶಿವಾನಂದ ಗೊರನಾಳೆ ಇತರರು ಇದ್ದರು.